Kalaburagi | ಸ್ವಚ್ಛತೆ ಕಾಪಾಡಿದರೆ ಮಾತ್ರ ಡೆಂಗ್ಯೂ ನಿಯಂತ್ರಣ ಸಾಧ್ಯ: ಡಾ.ಶರಣಬಸಪ್ಪ ಕ್ಯಾತನಾಳ

ಕಲಬುರಗಿ: ಮನೆ ಸೇರಿದಂತೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಮಾತ್ರ ಡೆಂಗ್ಯೂ ನಿಯಂತ್ರಣ ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಎನ್.ಆರ್. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ರಾಮಜೀ ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡೆಂಗ್ಯೂ ರೋಗವು ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಮುಂಗಾರು ಆರಂಭವಾದ ಬಳಿಕ ಇದರ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಮನೆಯ ಸುತ್ತಮುತ್ತ ಎಲ್ಲಿಯೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ತೆಂಗಿನ ಚಿಪ್ಪು, ಹಳೆಯ ಟೈರ್ ಹಾಗೂ ಇತರ ವಸ್ತುಗಳಲ್ಲಿ ಕೊಳಕು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ರೋಗ ನಿರಾಶ್ರಿತ ಅಧಿಕಾರಿ ಡಾ. ರಾಕೇಶ ಕಾಂಬಳೆ ಮಾತನಾಡಿ, ಡೆಂಗ್ಯೂ ನಿಯಂತ್ರಣ ಕ್ರಮಗಳು ಹಾಗೂ ವೈಯಕ್ತಿಕ ರಕ್ಷಣಾತ್ಮಕ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎನ್.ಆರ್. ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಾಗಯ್ಯಸ್ವಾಮಿ ಮಠಪತಿ ಮಾತನಾಡಿ, ಡೆಂಗ್ಯೂ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಬೌದ್ಧ ಧರ್ಮಗುರು ಜ್ಯೋತಿ ಭಂತೇಜಿ ಮಾತನಾಡಿ, ಆರೋಗ್ಯವೇ ಭಾಗ್ಯವಾಗಿದ್ದು, ಡೆಂಗ್ಯೂ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿ ಸಹಕರಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕೀಟಶಾಸ್ತ್ರ ತಜ್ಞ ಚಾಮರಾಜ ದೊಡ್ಡಮನಿ ಮಾತನಾಡಿ, ವಾರಕ್ಕೊಮ್ಮೆ ಮನೆ ಸ್ವಚ್ಛಗೊಳಿಸಿ, ನೀರಿನ ಪಾತ್ರೆಗಳನ್ನು ಖಾಲಿ ಮಾಡಿ ತೊಳೆದು ಒಣಗಿಸಿದ ಬಳಿಕವೇ ಮತ್ತೆ ನೀರು ತುಂಬಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕನ್ಸಲ್ಟೆಂಟ್ ಕರ್ಣಿಕ ಕೋರೆ ಮಾತನಾಡಿ, ಎಳೆನೀರು ವ್ಯಾಪಾರಿಗಳು, ಟೈರ್ ರಿಪೇರಿ ಕಾರ್ಮಿಕರು, ಕಟ್ಟಡ ನಿರ್ಮಾಣ ಮಾಲೀಕರು ಹಾಗೂ ಬೀದಿ ವ್ಯಾಪಾರಿಗಳು ತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು, ವಿವಿಧ ಕಾರ್ಯಕ್ರಮಗಳ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ರಾಮಜೀ ನಗರದ ಹಿರಿಯರು ಗಣ್ಯರು, ತಾಯಂದಿರು ಉಪಸ್ಥಿತರಿದ್ದರು.






