Kalaburagi | ಶಿಕ್ಷಕರ ದಿನದಂದೇ ‘ಪ್ರಜಾ ಸೇವೆ’ ಕಾರ್ಯಕ್ರಮಕ್ಕೆ ಶಿಕ್ಷಕರ ನಿಯೋಜನೆ ಸರಿಯಲ್ಲ : ಶಶೀಲ್ ನಮೋಶಿ

ಕಲಬುರಗಿ: ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯಂದೇ ಶಿಕ್ಷಕರನ್ನು ‘ಪ್ರಜಾ ಸೇವೆ’ಯಂತಹ ಸರ್ಕಾರಿ ಕಾರ್ಯಕ್ರಮಗಳಲ್ಲಿ ತೊಡಗಿಸುವುದು ಎಷ್ಟು ಸಮಂಜಸ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಪ್ರಶ್ನಿಸಿದ್ದಾರೆ.
ಸೆಪ್ಟೆಂಬರ್ 5ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಪ್ರಜಾ ಸೇವೆ’ ಕಾರ್ಯಕ್ರಮ ಆರಂಭಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶವನ್ನು ಸರ್ಕಾರ ತಕ್ಷಣ ಮರುಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5ನ್ನು ದೇಶಾದ್ಯಂತ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಶಿಕ್ಷಣದ ಮೂಲಕ ಸಮಾಜ ಮತ್ತು ರಾಷ್ಟ್ರದ ಭವಿಷ್ಯ ರೂಪಿಸುವ ಶಿಕ್ಷಕರ ಸೇವೆ, ತ್ಯಾಗ ಹಾಗೂ ಕೊಡುಗೆಯನ್ನು ಗೌರವಿಸುವ ದಿನದಂದೇ ಅವರನ್ನು ಮತ್ತೊಂದು ಸರ್ಕಾರಿ ಕಾರ್ಯಕ್ರಮದ ನಿರ್ವಹಣೆಗೆ ನಿಯೋಜಿಸುವುದು ಶಿಕ್ಷಕರ ದಿನಾಚರಣೆಯ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ನಮೋಶಿ ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಗಸ್ಟ್ 27ರ ಆದೇಶದಂತೆ ಸೆಪ್ಟೆಂಬರ್ 5ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಾರ್ವಜನಿಕ ಶಿಕ್ಷಣ ಅಭಿಯಾನ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ. ಶಾಲೆಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.
ಶಿಕ್ಷಕರ ಪ್ರಮುಖ ಜವಾಬ್ದಾರಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಾಗಿದೆ. ಈಗಾಗಲೇ ಬೋಧನೆಯ ಜೊತೆಗೆ ದಾಖಲೆ ನಿರ್ವಹಣೆ, ಸಮೀಕ್ಷೆಗಳು, ಸಭೆಗಳು ಸೇರಿದಂತೆ ಹಲವು ಬೋಧನೇತರ ಸರ್ಕಾರಿ ಕೆಲಸಗಳನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಜನಸೇವೆಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದಾಗ ಇಂತಹ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಶಿಕ್ಷಕರ ಮೇಲೆಯೇ ವಹಿಸುವುದು ಏಕೆ? ಅದರಲ್ಲೂ ಶಿಕ್ಷಕರ ದಿನದಂದೇ ಮತ್ತೊಂದು ಕಾರ್ಯಕ್ರಮದ ಹೊರೆ ಹೊರಿಸುವ ಅಗತ್ಯವೇನು ಎಂದು ಶಶೀಲ್ ನಮೋಶಿ ಪ್ರಶ್ನಿಸಿದ್ದಾರೆ.






