ಕಲಬುರಗಿ | ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರಿಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ವತಿಯಿಂದ ʼಎಕ್ಸಲೆನ್ಸ್ ಇನ್ ಗವರ್ನನ್ಸ್ʼ ಪ್ರಶಸ್ತಿ ಪ್ರದಾನ

ಕಲಬುರಗಿ : ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೃಷಿ, ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ಹಲವು ಉಪಕ್ರಮಗಳ ಮೂಲಕ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಕ್ಕಾಗಿ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರಿಗೆ ಮಂಗಳವಾರ ಭಾರತದ ಮಾಧ್ಯಮ ಲೋಕದ ಪ್ರತಿಷ್ಠಿತ ಸಂಸ್ಥೆ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ಕೊಡಮಾಡಲಾಗುವ ʼದಿ ಇಂಡಿಯನ್ ಎಕ್ಸ್‌ಪ್ರೆಸ್ ಎಕ್ಸಲೆನ್ಸ್ ಇನ್ ಗವರ್ನನ್ಸ್ʼ ಅವಾರ್ಡ್ ಪ್ರದಾನ ಮಾಡಲಾಯಿತು.
ನವದೆಹಲಿಯ ಐ.ಟಿ.ಸಿ ಮೌರ್ಯ ಹೋಟೆಲ್ ನಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಈ ಸಂದರ್ಭದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ಚೇರಮೆನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ವಿವೇಕ್ ಗೋಯಂಕಾ ಅವರ ಸಮಕ್ಷಮ ಕೇಂದ್ರದ ರೈಲ್ವೆ, ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನ್ ವೈಷ್ಣವ್ ಅವರು ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿದರು.
ಕಲಬುರಗಿ ಜಿಲ್ಲೆಯಲ್ಲಿ ಜನರ ಜೀವನಮಟ್ಟ ಸುಧಾರಿಸಲು ಮತ್ತು ಬದಲಾವಣೆಯ ಪ್ರಮುಖ ಸಾಧನವಾಗಿರಲು ಅರ್ಥಪೂರ್ಣ ಕೊಡುಗೆ ನೀಡಿದ್ದಕ್ಕಾಗಿ ಫೈನೆಸ್ಟ್ ಮ್ಯಾಜಿಸ್ಟ್ರೇಟ್ ಇನ್ ಇಂಡಿಯಾ ಜ್ಯೂರಿ ಸ್ಪೆಷಲ್ ಅವಾರ್ಡ್ ಎಂದು ಸಂಬೋಧಿಸಿ ಬಿ.ಫೌಝಿಯಾ ತರನ್ನುಮ್ ಅವರಿಗೆ ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿಗೆ ದೇಶದಾದ್ಯಂತ ಸ್ವೀಕೃತ 450ಕ್ಕೂ ಹೆಚ್ಚು ಅರ್ಜಿಗಳನ್ನು ಹಲವಾರು ಸುತ್ತಿನ ಮೌಲ್ಯಮಾಪನ, ಪರಿಶೀಲನೆ ಒಳಗೊಂಡ ಕಠಿಣ ಪ್ರಕ್ರಿಯೆ ನಂತರ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ವಜಾಹತ್ ಹಬೀಬುಲ್ಲಾ ನೇತೃತ್ವದ ಪ್ರತಿಷ್ಠಿತ ತೀರ್ಪುಗಾರರ ತಂಡವು ಈ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿತ್ತು. ಕೇಂದ್ರದ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್, ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾಯ್, ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಅಮರ್ಜಿತ್ ಸಿನ್ಹಾ ಜ್ಯೂರಿ ಕಮಿಟಿಯ ಇತರೆ ಸದಸ್ಯರಾಗಿದ್ದರು.
ವಿ.ಟಿ. ಪ್ರದರ್ಶನ :
ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಮುನ್ನ ವೇದಿಕೆಯಲ್ಲಿ ಪ್ರದರ್ಶಿಸಲಾದ ವಿ.ಟಿ.ಯಲ್ಲಿ ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಕಲಬುರಗಿಯಲ್ಲಿ ಶೇ.90 ರಷ್ಟು ಮಳೆಯಾಶ್ರಿತ ಪ್ರದೇಶ ಕೃಷಿಗೆ ಒಳಪಡುತ್ತಿದ್ದು, ಅಲ್ಲಿ ಜೋಳ ಮತ್ತು ಸಜ್ಜೆ ಪ್ರಧಾನ ಆಹಾರವಾಗಿದೆ. ಮಹಿಳೆಯರಿಗೆ ಉದ್ಯೋಗ ಮತ್ತು ಗ್ರಾಹಕರಿಗೆ ಆರೋಗ್ಯಕರ ಆಹಾರ ಒದಗಿಸಲು ಕಲಬುರಗಿ ಜಿಲ್ಲಾಡಳಿತ ಕಲಬುರಗಿ ರೊಟ್ಟಿಗೆ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆಯನ್ನು ಕಲ್ಪಿಸಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ರೊಟ್ಟಿ ತಯಾರಿಸುವ ಯಂತ್ರಗಳನ್ನು ಒದಗಿಸಲಾಗಿದೆ.
ಇದಲ್ಲದೆ ರೈತರಿಗೆ 361.77 ಕೋಟಿ ರೂ. ಬರ ಪರಿಹಾರ, ವಿವಿಧ ಇಲಾಖೆಯ ಸಹಯೋಗದೊಂದಿಗೆ ಮಿಷನ್ ಸುರಕ್ಷಾ ಮೂಲಕ ಹೆಣ್ಣು ಮಕ್ಕಳ ಸಂರಕ್ಷಣೆ ನಿಟ್ಟಿನಲ್ಲಿ 4.23 ಲಕ್ಷ ಮಕ್ಕಳು ಮತ್ತು ಪೋಷಕರಲ್ಲಿ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ ಕುರಿತು ಜನಜಾಗೃತಿ ಮೂಡಿಸಿರುವುದು ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಪಹಣಿಗೆ ಆಧಾರ್ ಜೋಡಣೆ ಕಾರ್ಯದಲ್ಲಿ ಜಿಲ್ಲೆಯಲ್ಲಿ ಶೇ.88 ರಷ್ಟು ಪ್ರಗತಿ ಸಾಧಿಸಿರುವುದಕ್ಕೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ವಿವರಣೆ ನೀಡಲಾಯಿತು.







