Kalaburagi | ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ: ರವಿ ಹಂಜ್, ವಿಶ್ವೇಶ್ವರ ಭಟ್ ಬಂಧನಕ್ಕೆ ಆಗ್ರಹ

ಕಲಬುರಗಿ: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ರವಿ ಹಂಜ್ ಹಾಗೂ ಅವರಿಗೆ ಪ್ರೇರಣೆ ಮತ್ತು ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಪತ್ರಕರ್ತ ವಿಶ್ವೇಶ್ವರ ಭಟ್ ಅವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಬಸವ ತತ್ವ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿ ಆಗ್ರಹಿಸಿದೆ.
ನಗರದ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಯ ಮುಂದೆ ಸಮಿತಿಯ ಪ್ರಮುಖರು ಸಾಂಕೇತಿಕ ಪ್ರತಿಭಟನಾ ಧರಣಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಪ್ರಕರಣದಲ್ಲಿ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಸರ್ಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಬಳಿಕ ಕೆಲವರಲ್ಲಿ ಅಸಹನೆ ಹೆಚ್ಚಾಗಿದೆ. ಸಮಾನತೆ, ಕಾಯಕ ಮತ್ತು ಮಾನವೀಯತೆಯ ತತ್ವಗಳನ್ನು ಸಾರಿದ ಬಸವಾದಿ ಶರಣರ ಚಿಂತನೆಗಳನ್ನು ಸಹಿಸದ ಮನೋಭಾವದಿಂದ ಅವರ ಚಾರಿತ್ರ್ಯ ಹಾಗೂ ವಚನ ಸಾಹಿತ್ಯದ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಲಾಗುತ್ತಿದೆ. ವಚನಗಳ ಅಪವ್ಯಾಖ್ಯಾನ ಮಾಡುವ ಪ್ರಯತ್ನಗಳು ಇತ್ತೀಚೆಗೆ ತೀವ್ರಗೊಂಡಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರವಿ ಹಂಜ್ ಅವರು ವಚನಕಾರರ ಕುರಿತು ಆಧಾರರಹಿತ ಪುಸ್ತಕ ರಚಿಸುವುದರ ಜೊತೆಗೆ, ವಿಶ್ವವಾಣಿ ಟಿವಿ ಸಂದರ್ಶನದಲ್ಲಿ ಬಸವಣ್ಣನವರ ವಿರುದ್ಧ ಲೂಟಿಕೋರ, ಕೊಲೆಗಡುಕ, ಸುಳ್ಳುಖೋರ ಹಾಗೂ ಪಿತೂರಿಗಾರ ಎಂಬಂತಹ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. ಇಂತಹ ಹೇಳಿಕೆಗಳಿಗೆ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಪ್ರೇರಣೆ ನೀಡಿದ್ದಾರೆ ಎಂಬ ಆರೋಪವೂ ಇದೆ. ಪುಸ್ತಕ ಬರೆಯಲು ವಿಶ್ವೇಶ್ವರ ಭಟ್ಟರೇ ಪ್ರೇರೇಪಿಸಿದ್ದಾರೆ ಎಂದು ರವಿ ಹಂಜ್ ಹೇಳಿಕೊಂಡಿದ್ದಾರೆ. ರವಿ ಹಂಜ್ ಅವರನ್ನು ಬಂಧಿಸಲಾಗಿದ್ದರೂ, ವಿಶ್ವೇಶ್ವರ ಭಟ್ ಅವರನ್ನು ಇನ್ನೂ ಬಂಧಿಸಿಲ್ಲ. ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ, ವಿವಾದಿತ ಪುಸ್ತಕವನ್ನು ಹೊಗಳಿದ್ದಾರೆ ಎನ್ನಲಾದ ಶಂಕರ ಬಿದರಿ ಹಾಗೂ ಮನು ಬಳಿಗಾರ ಅವರ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಡಾ. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಅರುಣ್ ಜೋಳದಕೂಡ್ಲಿಗಿ ಮಾತನಾಡಿ, ಪುರಾಣಗಳು ಮತ್ತು ಕಾಲ್ಪನಿಕ ಕಾವ್ಯಗಳನ್ನು ಚಾರಿತ್ರಿಕ ದಾಖಲೆಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ಅವುಗಳನ್ನು ಆಧಾರವಾಗಿಟ್ಟುಕೊಂಡು ವಚನಕಾರರ ಕುರಿತು ತಪ್ಪು ಮಾಹಿತಿ ಹರಡುವುದನ್ನು ಒಪ್ಪಲಾಗದು. ವಚನಕಾರರ ಕಾಲಘಟ್ಟದ ನಂತರ ಸುಮಾರು 300ರಿಂದ 400 ವರ್ಷಗಳ ಅಂತರದಲ್ಲಿ ರಚನೆಯಾದ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಇತಿಹಾಸವನ್ನು ವ್ಯಾಖ್ಯಾನಿಸುವುದು ವೈಜ್ಞಾನಿಕ ಸಂಶೋಧನೆಯಲ್ಲ ಎಂದು ಹೇಳಿದರು.
ಸಂವಿಧಾನದಲ್ಲಿ ಸನಾತನ ಮತ್ತು ಮನುಸ್ಮೃತಿಯ ಅಂಶಗಳಿವೆ ಎಂಬ ಕನ್ನೇರಿ ಸ್ವಾಮೀಜಿ ಅವರ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ಸಂವಿಧಾನವೇ ಎಲ್ಲ ಸಮುದಾಯಗಳ ಹಕ್ಕು ಮತ್ತು ಸಮಾನತೆಗೆ ಆಧಾರವಾಗಿದ್ದು, ಅದಕ್ಕೆ ವಿರುದ್ಧವಾಗಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. ‘ಹಿಂದೂ ಶರಣರ ಸಮಾವೇಶ’ ಎಂಬ ಪದ ಬಳಕೆಯ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ಬಸವಣ್ಣ, ಬುದ್ಧ, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ರಾಷ್ಟ್ರೀಯ ನಾಯಕರಿಗೆ ಹಾಗೂ ಅವರ ಸಿದ್ಧಾಂತಗಳಿಗೆ ಅವಮಾನ ಮಾಡುವವರ ವಿರುದ್ಧ ಕಠಿಣ ಕಾನೂನು ಜಾರಿಗೆ ತರಬೇಕು. ಅಂತಹವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ, ಅವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಬಾರದು ಹಾಗೂ ಮನೆಗಳ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸುವಂತಹ ಕಠಿಣ ಕಾನೂನನ್ನು ಕರ್ನಾಟಕದಲ್ಲಿಯೂ ರಚಿಸಬೇಕು ಎಂದು ಆಗ್ರಹಿಸಿದರು.
ಬಸವ ಚಳವಳಿ ಮತ್ತು ಸಂವಿಧಾನದ ಆಶಯಗಳ ವಿರುದ್ಧ ನಡೆಯುತ್ತಿರುವ ಪ್ರಯತ್ನಗಳನ್ನು ಹಿಮ್ಮೆಟ್ಟಿಸಲು ಸಂಘಟಿತ ಹಾಗೂ ಸೈದ್ಧಾಂತಿಕ ಹೋರಾಟ ಅಗತ್ಯವಿದೆ. ಪ್ರತಿಭಟನೆಗಳು ಕೇವಲ ಸಾಂಕೇತಿಕವಾಗದೆ, ಸಮಾಜದಲ್ಲಿ ಸಮಾನತೆ ಮತ್ತು ವಚನ ಸಾಹಿತ್ಯದ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಮುಂದುವರಿಯಬೇಕು. ಬಸವಣ್ಣನವರ ತತ್ವ ಮತ್ತು ವಚನ ಚಳವಳಿಯ ಆಶಯಗಳನ್ನು ಉಳಿಸಲು ಜನರು ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಒಗ್ಗೂಡಬೇಕು. ತಪ್ಪು ಮತ್ತು ಸರಿಗಳ ನಡುವೆ ಸ್ಪಷ್ಟ ನಿಲುವು ತಳೆದು ಬಸವಾದಿ ಶರಣರ ವಿಚಾರಧಾರೆಯನ್ನು ರಕ್ಷಿಸಬೇಕು ಎಂದು ಕೆ. ನೀಲಾ ಕರೆ ನೀಡಿದರು.
ಬಸವ ತತ್ವಗಳ ಹೆಸರಿನಲ್ಲಿ ದ್ವಂದ್ವ ನಿಲುವು: ಪ್ರತಿಭಟನಾಕಾರರ ಆರೋಪ
ಬಸವಾದಿ ಶರಣರ ಸಿದ್ಧಾಂತಗಳನ್ನು ತಿರುಚುವ ಉದ್ದೇಶದಿಂದ ಅವರ ಹೆಸರಿನಲ್ಲಿ ನಕಲಿ ಸಮಾವೇಶಗಳನ್ನು ಆಯೋಜಿಸಿ ಬಸವ ತತ್ವಗಳಿಗೆ ಮಸಿ ಬಳಿಯುವ ಪ್ರಯತ್ನಗಳು ನಡೆಯುತ್ತಿವೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಲಬುರಗಿಯಲ್ಲಿ ಕನ್ನೇರಿ ಸ್ವಾಮೀಜಿಯವರನ್ನು ಆಹ್ವಾನಿಸಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ನಡೆಸಿದವರೇ ಶನಿವಾರ ಪ್ರತಿಭಟನೆಯ ಹೆಸರಿನಲ್ಲಿ ಬಸವಣ್ಣನವರ ಪರ ನಿಂತಂತೆ ವರ್ತಿಸುತ್ತಿದ್ದಾರೆ. ಇದು ದ್ವಂದ್ವ ನಿಲುವು ಮತ್ತು ಢೋಂಗಿತನ ಎಂದು ಬಿಜೆಪಿ ಮುಖಂಡರ ವಿರುದ್ಧ ಪ್ರತಿಭಟನಾಕಾರರು ವಾಗ್ದಾಳಿ ನಡೆಸಿದರು. ಬಸವಣ್ಣನವರ ಸಮಾನತೆ, ಜಾತ್ಯತೀತತೆ ಮತ್ತು ಮಾನವೀಯತೆಯ ತತ್ವಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳದೆ, ಅವುಗಳ ಮೂಲ ಆಶಯಗಳಿಗೆ ಬದ್ಧರಾಗಿರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರವಿ ಸಜ್ಜನ್, ಮಲ್ಲಿಕಾರ್ಜುನ ವಡ್ಡನಕೇರಿ, ಸಿದ್ರಾಮಪ್ಪ, ಧನರಾಜ್ ತಾಂಬೋಳೆ, ನಾಗೇಂದ್ರಪ್ಪ ಅವರಾದಿ, ಕೋದಂಡರಾಮ್, ಸುಧಾಮ ಧನ್ನಿ, ದತ್ತಾತ್ರೇಯ ಇಕ್ಕಳಕಿ, ವಿಶ್ವನಾಥ್ ಮಂಗಲಗಿ, ಡಾ. ಗಣಪತಿ ಸಿಂಧೆ, ಅಮೃತ ಸಜ್ಜನ್, ಮಲ್ಲಿಕಾರ್ಜುನ ಗೋಳಾ, ಬಾಬುರಾವ್ ಜನಕಟ್ಟೆ, ಬಸವರಾಜ್ ಜನಕಟ್ಟಿ, ಲವಿತ್ರ ವಸ್ತ್ರದ್, ಸಾಬಮ್ಮ ಎಂ., ನಾಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಸವಣ್ಣನವರ ವಿಚಾರಗಳ ಕುರಿತು ಸೈದ್ಧಾಂತಿಕ ಚರ್ಚೆಯಾಗಲಿ:
ಬಸವಣ್ಣನವರು ಚಾರಿತ್ರಿಕ ವ್ಯಕ್ತಿಯಾಗಿದ್ದು, ಅವರ ವಿಚಾರಗಳ ಕುರಿತು ಸೈದ್ಧಾಂತಿಕ ಚರ್ಚೆಯಾಗಬೇಕೇ ಹೊರತು ಧಾರ್ಮಿಕ ಸಂಘರ್ಷಕ್ಕೆ ಎಡೆಮಾಡಿಕೊಡಬಾರದು. ಕನ್ನೇರಿ ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೆಲವರು ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ 200 ಪುಟಗಳ ಪುಸ್ತಕ ರಚಿಸಿದ್ದವರು ಇದೀಗ 600 ಪುಟಗಳ ಪುಸ್ತಕ ರಚಿಸಿದ್ದಾರೆ. ಪೌರಾಣಿಕ ವಿಚಾರಗಳ ಕುರಿತು ಟೀಕೆ-ಟಿಪ್ಪಣಿ ಮಾಡುವುದು ಬೇರೆ; ಚಾರಿತ್ರಿಕ ವ್ಯಕ್ತಿತ್ವವನ್ನು ತಿರುಚುವುದು ಬೇರೆ. ದುಡಿಯುವ ಜನರು ಆರ್ಥಿಕ ಸಂಪತ್ತಿನಿಂದ ದೂರ ಉಳಿಯುವಂತೆ ಮಾಡುವುದೇ ಇಂತಹ ಪ್ರಯತ್ನಗಳ ಹಿಂದಿನ ಉದ್ದೇಶವಾಗಿದೆ ಎಂದು ಲೇಖಕಿ ಮೀನಾಕ್ಷಿ ಬಾಳಿ ಹೇಳಿದರು.






