ಕಲಬುರಗಿ | ಜ.19 ರಂದು ಶಾಸಕ ಅವಿನಾಶ್ ಜಾಧವ್ ಕಚೇರಿ ಎದುರು ಧರಣಿ: ರಮಾಕಾಂತ್ ಕುಲಕರ್ಣಿ

ಕಲಬುರಗಿ: ರಾಜ್ಯ ಸಿಮೆಂಟ್ ಕಾರ್ಖಾನೆಗಳಲ್ಲಿ ಅರ್ಹ ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಜ.19 ರಂದು ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಅವರ ಚಿಂಚೋಳಿಯಲ್ಲಿರುವ ಶಾಸಕರ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಹೋರಾಟಗಾರ ರಮಾಕಾಂತ್ ಕುಲಕರ್ಣಿ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ 9 ಕಾರ್ಖಾನೆಗಳಿದ್ದು, ಇದರಲ್ಲಿ 8 ರಿಂದ 9 ಸಾವಿರ ಜನ ಗುತ್ತಿಗೆ ಆಧಾರದ ಅರ್ಹ ಕಾರ್ಮಿಕರು ಇದ್ದಾರೆ, ಆದರೆ ಅವರು ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುತ್ತಿಲ್ಲ. ಜೊತೆಗೆ ಅವರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಅರ್ಹ ಕಾರ್ಮಿಕರ ಸರ್ವೇ ಮಾಡುವ ಮೂಲಕ ಅವರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
2024 ರ ಜು.9 ರಂದು ಕೇಂದ್ರ ಕಾರ್ಮಿಕ ಸಚಿವಾಲಯವು ಸಿಮೆಂಟ್ ಕಾರ್ಖಾನೆಗಳ ಗುತ್ತಿಗೆ ಆಧಾರದ ಕಾರ್ಮಿಕರಿಗೆ ಸಮಾನ ವೇತನ ಸೇರಿದಂತೆ ಇತರೆ ಸೌಲಭ್ಯಗಳು ಕುರಿತಾಗಿ ಕ್ರಮ ವಹಿಸುವಂತೆ ಬೆಂಗಳೂರಿನ ಕಾರ್ಮಿಕ ಇಲಾಖೆಗೆ ಸೂಚಿಸಿದೆ. ಆದರೂ ಇಲಾಖೆಯ ಅಧಿಕಾರಿಗಳು ಕಾರ್ಮಿಕರ ಸೌಲಭ್ಯಗಳನ್ನು ದೊರಕಿಸುವಲ್ಲಿ ಶ್ರಮಿಸುತ್ತಿಲ್ಲ. ಶಾಸಕರ ಕಚೇರಿ ಎದುರು ಪ್ರತಿಭಟಿಸಿ, ಮನವಿ ನೀಡಿ, ಅವರ ಮೂಲಕ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಲಾಗುತ್ತಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಬಿ.ಎಂ ರಾವೂರ ಮಾತನಾಡಿ, ಕಲಬುರಗಿ ಭಾಗದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಎಲ್ಲೋ ಆಗಿರುವ ಘಟನೆಗಳಿಗೆ ಪ್ರತಿಕ್ರಿಯೆ ನೀಡುವ ರಾಜಕಾರಣಿಗಳು ತಮ್ಮದೇ ಜಿಲ್ಲೆಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಹಾಗೂ ಧ್ವನಿಯಾಗುವುದರಲ್ಲಿ ವಿಫಲರಾಗಿದ್ದಾರೆ. ಕಾರ್ಮಿಕರ ಕುರಿತು ಚುರುಕಿನ ಸಮೀಕ್ಷೆ ನಡೆಸಬೇಕು, ಅಂದಾಗ ಮಾತ್ರ ಕಾರ್ಮಿಕರ ನೈಜ ಅಂಶಗಳ ಸರ್ಕಾರಕ್ಕೆ ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಎನ್.ಕೆ ಅರ್ಜುನ್, ಉಮೇಶ್ ಸಿಂಗ್ ಚೌಹಾಣ್, ಮತ್ತಿತರರು ಇದ್ದರು.







