ಕಲಬುರಗಿ | ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಚರ್ಚೆ ಅಗತ್ಯ: ಎಸ್.ಆರ್.ಮೆಹರೋಝ್ ಖಾನ್

ಕಲಬುರಗಿ: ರಾಜ್ಯ ಸರ್ಕಾರ ಜನರ ಬದುಕು ಸುಸ್ಥಿರಗೊಳಿಸಲು ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೆ ತಂದಿದ್ದು, ಇದನ್ನು ಅರ್ಹರಿಗೆ ತಲುಪಲು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಸಮಿತಿಯು ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸಬೇಕೆಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಲಬುರಗಿ ವಿಭಾಗದ ಉಪಾಧ್ಯಕ್ಷ ಎಸ್.ಆರ್.ಮೆಹರೋಝ್ ಖಾನ್ ತಿಳಿಸಿದರು.
ಬುಧವಾರ ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಲ್ಲಿ ಏನೇ ತೊಡಕಿದಲ್ಲಿ ಅದನ್ನು ಬಗೆಹರಿಸಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲು ಮತ್ತು ಮುಕ್ತವಾಗಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಲು ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರು ತಾಲೂಕು, ಹಳ್ಳಿ ಪ್ರವಾಸ ಕೈಗೊಳ್ಳಬೇಕು. ಮುಂಚಿತವಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದರು.
ಗೃಹ ಲಕ್ಣ್ಮೀ ಯೋಜನೆಯಿಂದ ಲಿಂಗತ್ವ ಅಲ್ಪಸಂಖ್ಯಾತರು ಹೊರಗುಳಿಯದಂತೆ ಎಚ್ಚರವಹಿಸಬೇಕು. ಅನ್ನ ಭಾಗ್ಯ ಯೋಜನೆಯಡಿ ನೀಡಲಾಗುವ ಉಚಿತ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗದಂತೆ ನಿಗಾ ಇಡಬೇಕು. ಯುವ ನಿಧಿ ನೋಂದಣಿ ಹೆಚ್ಚಿಸಲು ಕಾಲೇಜು, ವಿ.ವಿ.ಗಳಿಗೆ ಭೇಟಿ ನೀಡಿ ಅರಿವು ಮೂಡಿಸಬೇಕು ಮತ್ತು ಯುವ ನಿಧಿ ಯೋಜನೆಯಡಿ ಉದ್ಯೋಗ ಪಡೆಯಲು ಕೌಶಲ್ಯ ತರಬೇತಿ ನೀಡಬೇಕು ಎಂದರು.
ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ, 53 ಪ್ರಕರಣ ದಾಖಲು :
ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಉಚಿತ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದವರ ಮೇಲೆ ಇಲಾಖೆ ನಿಗಾ ಇಟ್ಟಿದ್ದು, ಪ್ರತಿ ಚೆಕ್ ಪೋಸ್ಟ್ ನಲ್ಲಿ ಆಹಾರ ನಿರೀಕ್ಷರನ್ನು ನಿಯೋಜಿಸಲಾಗಿದೆ. 2024ರ ಏಪ್ರಿಲ್ ನಿಂದ ಇಲ್ಲಿಯವರೆಗೆ ಅಕ್ರಮ ಅಕ್ಕಿ ಮಾರಾಟ ಸಂಬಂಧ 54 ಪ್ರಕರಣ ದಾಖಲಿಸಿ, 103 ಜನರನ್ನು ವಶಕ್ಕೆ ಪಡೆಯಲಾಗಿದೆ. ಇವರಿಂದ 2.78 ಕೋಟಿ ರೂ. ಮೊತ್ತದ 4,244 ಕ್ವಿಂಟಾಲ್ ಆಹಾರ ಧಾನ್ಯ ವಶಕ್ಕೆ ಪಡೆಯಲಾಗಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ ಮಾಹಿತಿ ನೀಡಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಉಪಾಧ್ಯಕ್ಷರಾದ ಸೋಮಶೇಖರ ಹಿರೇಮಠ, ನರಸಿಂಹಲು, ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಮೀನಾ, ಮುಖ್ಯ ಯೋಜನಾಧಿಕಾರಿ ಎಸ್.ಎಸ್.ಮಠಪತಿ, ಜೆಸ್ಕಾಂ ಅಧೀಕ್ಷಕ ಅಭಿಯಂತ ಖಂಡೆಪ್ಪ ಸೋನಾವಣೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕಿ ಭಾರತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮುರುಗೇಶ ಗುಣಾರೆ, ಕೆ.ಕೆ.ಆರ್.ಟಿ.ಸಿ ಅಧಿಕಾರಿಗಳು ಸೇರಿದಂತೆ ಹಲವರು ಇದ್ದರು.







