ಕಲಬುರಗಿ | ಟ್ರಾಫಿಕ್ ಪೊಲೀಸರಿಗೆ ಹವಾ ನಿಯಂತ್ರಿತ ಹೆಲ್ಮೆಟ್ ವಿತರಣೆ
ರಾಜ್ಯದಲ್ಲೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಪ್ರಯತ್ನ : ಕಮಿಷನರ್ ಡಾ.ಶರಣಪ್ಪ ಎಸ್.ಡಿ

ಕಲಬುರಗಿ : ಬಿರು ಬಿಸಿಲಿನಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಯವರ ಹಿತ ರಕ್ಷಣೆ ದೃಷ್ಟಿಯಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ಕಲಬುರಗಿ ನಗರ ಪೊಲೀಸ್ ವತಿಯಿಂದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯವರಿಗೆ ಹವಾ ನಿಯಂತ್ರಿತ(ಎ.ಸಿ)ಹೆಲ್ಮೆಟ್ ವಿತರಿಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ ಹೇಳಿದ್ದಾರೆ.
ನಗರದ ಪೊಲೀಸ್ ಆಯುಕ್ತಾಲಯದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತವಾಗಿ 10 ಹವಾ ನಿಯಂತ್ರಿತ ಹೆಲ್ಮೆಟ್, 10 ಪೊಲ್ಲ್ಯೂಷನ್ ಕಂಟ್ರೋಲ್ ಮಾಸ್ಕ್, 140 ಮಿಂಚುವ ಜಾಕೆಟ್, ರಾತ್ರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸಲು 150 ಬ್ಯಾಟನ್ ಗಳನ್ನು ವಿತರಿಸಲಾಗಿದೆ ಎಂದರು.
ಕಲಬುರಗಿಯಲ್ಲಿ ತಾಪಮಾನ, ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆ ಟ್ರಾಫಿಕ್ ಸಿಬ್ಬಂದಿಯವರ ಆರೋಗ್ಯದ ಹಿತದೃಷ್ಟಿಯಿಂದ ಅವರಿಗೆ ಮೊದಲಾದ್ಯತೆಯಾಗಿ ಬಿಸಿಲಿನ ನಿಯಂತ್ರಣ ಪರಿಕರಗಳನ್ನು ಕೊಡಲಾಗುತ್ತಿದೆ. ಒಂದು ವೇಳೆ ಸಿಬ್ಬಂದಿಗಳಿಂದ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಬಂದರೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ವಿಸ್ತರಿಸಲಾಗುತ್ತದೆ ಎಂದ ಅವರು, ಈಗಾಗಲೇ ಟ್ರಾಫಿಕ್ ಪೊಲೀಸರಿಗೆ ಬಿಸಿಲಿನ ವೇಳೆಯಲ್ಲಿ ನೀರು, ಮಜ್ಜಿಗೆ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಎ.ಸಿ ಹೆಲ್ಮೆಟ್ ಚಾರ್ಜರ್ ಗೆ ಒಂದು ಬಾರಿ ಚಾರ್ಜ್ ಮಾಡಿದರೆ, ಗರಿಷ್ಠ 8 ಗಂಟೆಗಳ ಬ್ಯಾಟರಿಯ ಸಾಮರ್ಥ್ಯ ಹೊಂದಿದೆ, ಇದು ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತದೆ ಎಂದರು.
ಇದೇ ವೇಳೆಯಲ್ಲಿ ಪೊಲೀಸ್ ಕಮಿಷನರ್ ಅವರು, ಸಂಚಾರ ಪೊಲೀಸ್ ಠಾಣೆ - 1 ಮತ್ತು ಸಂಚಾರ ಪೊಲೀಸ್ ಠಾಣೆ - 2ರ ಪೊಲೀಸ್ ಅಧಿಕಾರಿಗಳಿಗೆ ಸಾಂಕೇತಿಕವಾಗಿ ಎ.ಸಿ ಹೆಲ್ಮೆಟ್ ಸೇರಿದಂತೆ ಇತರೆ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್, ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಯವರು ಹಾಜರಿದ್ದರು.







