Kalaburagi | ಸೀರತ್-ಉನ್-ನಬಿ ಸ್ಪರ್ಧೆಗಳ ಸೇವೆಗೆ ಪ್ರಶಂಸನಾ ಪತ್ರ ವಿತರಣೆ

ಕಲಬುರಗಿ: ಶಿಕ್ಷಣ ಹಾಗೂ ನೈತಿಕ ಮೌಲ್ಯಗಳ ವೃದ್ಧಿಗೆ ನೀಡಿದ ಗಮನಾರ್ಹ ಕೊಡುಗೆಯನ್ನು ಗುರುತಿಸಿ, ಹಬೀಬ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಜನಾಬ್ ಮಿರ್ಜಾ ಫೇರೂಜ ಇಮ್ರಾನ್ ಅವರಿಗೆ ವಿಶೇಷ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ನಗರದ ತಯ್ಯಬತ್ ಗರ್ಲ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಬುಧವಾರ ಅಸ್ರ್ ನಮಾಜಿನ ನಂತರ ನಡೆದ ಎಸೆಸೆಲ್ಸಿ ವಿದ್ಯಾರ್ಥಿನಿಯರ ಸನ್ಮಾನ ಸಮಾರಂಭದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು.
ಕಳೆದ ಏಳು ವರ್ಷಗಳಿಂದ ಸೀರತ್-ಉನ್-ನಬಿ ಸ್ಪರ್ಧೆಗಳ ಯಶಸ್ವಿ ಆಯೋಜನೆಗೆ ನೀಡಿದ ನಿರಂತರ ಸಹಕಾರಕ್ಕಾಗಿ ಈ ಸನ್ಮಾನ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ತಯ್ಯಬತ್ ಶಾಲೆಯು ವಿದ್ಯಾರ್ಥಿಗಳ ನೈತಿಕ ಹಾಗೂ ಶೈಕ್ಷಣಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಶ್ಲಾಘಿಸಿದರು. ಸೀರತ್-ಉನ್-ನಬಿ ಸ್ಪರ್ಧೆಗಳು ಕಲಬುರಗಿಯಲ್ಲಿ ಧಾರ್ಮಿಕ ಜಾಗೃತಿ ಹಾಗೂ ವಿದ್ಯಾಭಿವೃದ್ಧಿಗೆ ಪ್ರಮುಖ ವೇದಿಕೆಯಾಗಿವೆ ಎಂದು ಅಭಿಪ್ರಾಯಪಟ್ಟರು.
ಗೌರವ ಸ್ವೀಕರಿಸಿದ ಮಿರ್ಜಾ ಫೇರೂಜ ಇಮ್ರಾನ್ ಅವರು ಕೃತಜ್ಞತೆ ಸಲ್ಲಿಸಿ, ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಕಾರ್ಯಕ್ಕೆ ಮುಂದುವರಿದ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಿಲ್ಲಿ ಕೌನ್ಸಿಲ್ ಮುಖಂಡ ಡಾ.ಮುಹಮ್ಮದ್ ಅಸ್ಗರ್ ಚುಲಬುಲ್, ಮೌಲಾನಾ ಸೈಯದ್ ಖಾಸಿಂ ಬುಖಾರಿ ಖಾದ್ರಿ, ಇಕ್ಬಾಲ್ ಅಲಿ, ಮುಹಮ್ಮದ್ ರಫೀಕ್ ಅಹ್ಮದ್, ಡಾ.ಫಾರೂಕ್ ಮಣ್ಣೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.






