ಕಲಬುರಗಿ | ಜಿಲ್ಲಾಡಳಿತದಿಂದ ದೇವರ ದಾಸಿಮಯ್ಯ ಜಯಂತಿ ಆಚರಣೆ

ಕಲಬುರಗಿ: ದೇವರ ದಾಸಿಮಯ್ಯನವರ ಪವಾಡ ಇಂದಿಗೂ ಜೀವಂತ ಸಾಕ್ಷಿಯಾಗಿದೆ. ಮುದನೂರಿನಲ್ಲಿ ಏಳು ತೀರ್ಥಗಳಿಂದ ನೀರು ಇಂದಿಗೂ ಹರಿಯುತ್ತಿದ್ದು, ಬರಗಾಲದಲ್ಲೂ ಬತ್ತುವುದಿಲ್ಲ ಎಂದು ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ದೇವರ ದಾಸಿಮಯ್ಯ ಅಪ್ಪಟ ಶಿವಭಕ್ತರಾಗಿದ್ದು, ಭೀಕರ ಬರಗಾಲದ ಸಂದರ್ಭದಲ್ಲೂ ದಾಸೋಹ ನಡೆಸಿದ ಘಟನೆಗಳು ಅವರ ಜೀವನ ಚರಿತ್ರೆಯಲ್ಲಿ ಕಾಣಿಸುತ್ತವೆ. ಸರಳ ಕನ್ನಡದಲ್ಲಿ ಗಹನ ತತ್ವಗಳನ್ನು ವಚನಗಳ ಮೂಲಕ ಜನರಿಗೆ ತಲುಪಿಸಿದರು ಎಂದು ಹೇಳಿದರು.
ಈ ವೇಳೆ ಅವರು ದಾಸಿಮಯ್ಯನವರ ಪ್ರಸಿದ್ಧ ವಚನವನ್ನು ಉಲ್ಲೇಖಿಸಿದರು – “ಮೊಲೆ ಬಂದಡೆ ಹೆಣ್ಣೆಂಬರು, ಗಡ್ಡ ಮೀಸೆ ಬಂದಡೆ ಗಂಡೆಂಬರು, ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ ರಾಮನಾಥ”.
ನೇಕಾರ ಸಮುದಾಯದ ಅಭಿವೃದ್ಧಿಗಾಗಿ ನೇಕಾರ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಜಾಗ ಒದಗಿಸಲಾಗುವುದು ಎಂದು ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ. ಶಾಸಕನಾಗಿ ತನ್ನ ಅನುದಾನದಿಂದ ಸಹ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ ಮಾತನಾಡಿ, ಹಿಂದಿನ ಕಾಲದಲ್ಲಿ ನೂಲಿನ ವೃತ್ತಿ ಗ್ರಾಮಗಳಲ್ಲಿ ವ್ಯಾಪಕವಾಗಿದ್ದರೂ ಯಂತ್ರೋಪಕರಣಗಳ ಬಳಕೆಯಿಂದ ಅದು ಕುಂಠಿತವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಹಾಗೂ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ನೇಕಾರರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಸಿದ್ಧಾಶ್ರಮ ವಿರಕ್ತ ಮಠದ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿದರು.
ಕಲಬುರಗಿ ಅನನ್ಯ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕರಾದ ಡಾ. ಕರುಣಾ ಜಮದಾರಖಾನಿ, ಅವರು ವಿಶೇಷ ಉಪನ್ಯಾಸದ ಮೂಲಕ ದೇವರ ದಾಸಿಮಯ್ಯನವರ ಜೀವನ ಸಾರ, ವಚನಗಳ ಸಾರ, ಮುಂತಾದ ವಿಷಯಗಳ ಸಂಕ್ಷಿಪ್ತ ಮಾಹಿತಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಎ. ನಾಸಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಡಬರಾಬಾದ ಅಭಿನವ ರೇವಣಸಿದ್ಧ ಪಟ್ಟದೇವರು, ಜಿಲ್ಲಾಧಿಕಾರಿ ಕಚೇರಿ ಸಹಾಯಕರಾದ ಶಿವಪ್ರಭು ಹಿರೇಮಠ, ಕರ್ನಾಟಕ ಜಿಲ್ಲಾ ನೇಕಾರ ಸಂಘದ ಒಕ್ಕೂಟದ ಅಧ್ಯಕ್ಷ ಪ್ರದೀಪ ಗಣೇಶ ಸಂಗಾ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಮಿತಿ ಅಧ್ಯಕ್ಷರಾದ ಶಾಂತಕುಮಾರ್ ಆರ್. ಯಳಸಂಗಿ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಇತರರಿದ್ದರು.







