ಕಲಬುರಗಿ | ಜೇವರ್ಗಿ ಪುರಸಭೆಯ 9 ಬಿಜೆಪಿ ಸದಸ್ಯರನ್ನು ಅನರ್ಹಗೊಳಿಸಿದ ಜಿಲ್ಲಾಧಿಕಾರಿ

ಕಲಬುರಗಿ: ಜೇವರ್ಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ ಆರೋಪದಲ್ಲಿ ಒಂಭತ್ತು ಮಂದಿ ಪುರಸಭೆ ಸದಸ್ಯರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಆದೇಶಿಸಿದ್ದಾರೆ.
ಸಂಗಣ್ಣ ಗೌಡ ಪಾಟೀಲ್, ಶ್ರೀ ಗುರುಶಾಂತಯ್ಯ ಸಿದ್ರಾಮಯ್ಯ ಹಿರೇಮಠ, ಕಸ್ತೂರಿಬಾಯಿ ಸಾಹೇಬಗೌಡ ಕಲ್ಲಾ, ಮಲ್ಲಿಕಾರ್ಜುನ ಭಾಗಪ್ಪ ಭಜಂತ್ರಿ, ಗಂಗೂಬಾಯಿ ಜಟ್ಟಿಂಗರಾಯ, ಸಿದ್ದರಾಮ ಯಳಸಂಗಿ, ಗುರುಲಿಂಗಪ್ಪ ಎಸ್ ಮಾಲೀಪಾಟೀಲ್, ಶರಣಮ್ಮ ತಳವಾರ ಹಾಗೂ ಚಂದ್ರಕಾಂತ ಮಹೇಂದ್ರಕರ್ ಅನರ್ಹಗೊಂಡ ಬಿಜೆಪಿ ಸದಸ್ಯರಾಗಿದ್ದಾರೆ.
ಬಿಜೆಪಿ ಪಕ್ಷದ ಮುಖಂಡರು ವಿಪ್ ಉಲ್ಲಂಘನೆ ಮಾಡಿದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು 9 ಮಂದಿಯನ್ನು ಜೇವರ್ಗಿ ಪುರಸಭೆ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿ ಆದೇಶಿಸಿದ್ದಾರೆ.
ಜೇವರ್ಗಿ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಕಳೆದ ಫೆಬ್ರವರಿ 12ರಂದು ಚುನಾವಣೆ ನಡೆದಿತ್ತು.17 ಸದಸ್ಯ ಬಲದೊಂದಿಗೆ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ, ಪಕ್ಷದ ಸದಸ್ಯರು ಬೇರೆ ಪಕ್ಷಕ್ಕೆ ತೆರಳದಂತೆ ಮುಂಜಾಗೃತೆಯಿಂದ ಬಿಜೆಪಿ ವಿಪ್ ಜಾರಿಗೊಳಿಸಿತ್ತು. ಆದರೆ, ಬಿಜೆಪಿಯ ಒಂಭತ್ತು ಸದಸ್ಯರು ಪಕ್ಷದ ವಿಪ್ ಅನ್ನು ಧಿಕ್ಕರಿಸಿ ಜೆಡಿಎಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು. ವಿಪ್ ಉಲ್ಲಂಘಿಸಿದವರ ವಿರುದ್ಧ ಬಿಜೆಪಿ ಜಿಲ್ಲಾಧಿಕಾರಿಗೆ ದೂರು ನೀಡಿತ್ತು.







