ಕಲಬುರಗಿ | ವಿವಿಧ ಕ್ರಿಯಾ ಯೋಜನೆಗಳಿಗೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅನುಮೋದನೆ

ಕಲಬುರಗಿ: 2025-26ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಪರಂಪರಾಗತ ಕೃಷಿ ವಿಕಾಸ ಯೋಜನೆ ಮತ್ತು ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆ ಸೇರಿದಂತೆ ಮತ್ತಿತರ ಯೋಜನೆಯ ಅನುಷ್ಟಾನಕ್ಕಾಗಿ ಕ್ರಿಯಾ ಯೋಜನೆಗಳಿಗೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಅನುಮೋದನೆ ನೀಡಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ನಿಗದಿಪಡಿಸಿದ ಆರ್ಥಿಕ ಮತ್ತು ಭೌತಿಕ ಗುರಿಗಳನ್ನು ಪರಿಶೀಲಿಸಿ ಪ್ರಸಕ್ತ ಸಾಲಿನ ಗುರಿಗಳನ್ನು ಅಕ್ಟೋಬರ್-ನವೆಂಬರ್ ಮಾಹೆಯ ಅಂತ್ಯದವರೆಗೆ ಪೂರ್ಣ ಪ್ರಗತಿ ಸಾಧಿಸಿ ಹೆಚ್ಚುವರಿ ಗುರಿಯನ್ನು ಪಡೆಯಬೇಕೆಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತಾಲ್ಲೂಕಿಗೆ ಒಂದರಂತೆ ಸಂಬಂಧಪಟ್ಟ ಸ್ಥಳಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ಚರ್ಚಿಸಿ ಅವಶ್ಯವಿರುವ ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆಗೆ ವಿಸ್ಕೃತ ಯೋಜನಾ ವರದಿಗಳನ್ನು ತಯಾರಿಸಿ ತೋಟಗಾರಿಕೆ ನಿರ್ದೇಶನಾಲಯಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಕಲಬುರಗಿ ಮತ್ತು ಚಿಂಚೋಳಿ ತಾಲ್ಲೂಕುಗಳು ಆಯ್ಕೆಯಾಗಿದ್ದು, ಹೆಚ್ಚುವರಿಯಾಗಿ 2 ಗುಚ್ಚಗಳನ್ನು ಆಯ್ಕೆಮಾಡಿ ತೋಟಗಾರಿಕೆ ನಿರ್ದೇಶನಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಮದಾರ್, ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ನಾಗನಗೌಡ, ಕೃಷಿ ವಿಜ್ಞಾನಿ ಸನ್ಮಿತಾ, ಹೈದ್ರಾಬಾದ್ ವೇದಿಕ ಸಂಸ್ಥೆಯ ಸುನೀತಾ ಸೇರಿದಂತೆ ವಿವಿಧ ತಾಲೂಕಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







