ಕಲಬುರಗಿ | ಜೇವರ್ಗಿ ತಾಲ್ಲೂಕಿನ ಹಲವೆಡೆಗೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಭೇಟಿ

ಕಲಬುರಗಿ : ಜೇವರ್ಗಿ ಪಟ್ಟಣ ವಿದ್ಯಾರ್ಥಿನಿ ನಿಲಯ, ಇಂದಿರಾ ಕ್ಯಾಂಟಿನ್ ಸೇರಿದಂತೆ ವಿವಿಧೆಡೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಭೇಟಿ ನೀಡಿ, ಪರಿಶೀಲಿಸಿದರು.
ಬೆಳಿಗ್ಗೆಯಿಂದಲೇ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಜೇವರ್ಗಿ ಪಟ್ಟಣದ ದತ್ತ ನಗರ ಬಡಾವಣೆಯ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ವಿಚಾರಿಸಿದರು.
ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡುವಲ್ಲಿ ವಿಫಲರಾಗದಿರಿ ಎಂದು ಸಿಬ್ಬಂದಿಯವರಿಗೆ ಎಚ್ಚರಿಕೆ ನೀಡಿದ ಅವರು, ವಿದ್ಯಾರ್ಥಿಗಳಿಗೆ ಒಂದು ಉತ್ತಮ ಗ್ರಂಥಾಲಯವನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿಕ್ಷಕರ ಪಾಠದ ಜೊತೆಗೆ ನಿಮ್ಮ ಓದಿನ ಕಡೆ ಹೆಚ್ಚಿನ ಗಮನವಿರಲಿ. ವಿದ್ಯಾರ್ಥಿ ಜೀವನದ ಸಮಯವನ್ನು ಸುಮ್ಮನೆ ವ್ಯರ್ಥ ಮಾಡದೆ ಉತ್ತಮ ಪ್ರಯತ್ನ ಮಾಡಿ ಜೀವನದಲ್ಲಿ ಸಾಧನೆಯನ್ನು ಮಾಡಿ, ತಂದೆ ತಾಯಿಯ ಹೆಸರು ತರಬೇಕು ಹಾಗೂ ನಿಮ್ಮ ಗುರಿಯನ್ನು ಯಾವುದೆ ಕಾರಣಕ್ಕೂ ಮರೆಯದಿರಿ ಎಂದು ಕಿವಿಮಾತು ಹೇಳಿದರು.
ಎಪಿಎಂಸಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟಿನ್ ವೀಕ್ಷಿಸಿದರು. ಚಿಗರಳ್ಳಿಯ ಹತ್ತಿ ಮಿಲ್, ಇಜೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ವಿಚಾರಿಸಿದರು. ಸಾರ್ವಜನಿಕರಿಗೆ ಸರಿಯಾದ ಮೂಲಭೂತ ಸೌಕರ್ಯ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಅಲ್ಲಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಮಲ್ಲಣ್ಣ ಯಲಗೋಡ, ಅಧಿಕಾರಿಗಳಾದ ಸಂಗಣ್ಣಗೌಡ, ಶಂಭುಲಿಂಗ ದೇಸಾಯಿ, ಮುನುರುದಿನ್ ದೌಲ, ತಜಮುಲುದಿನ್, ಮಲ್ಲಿಕಾರ್ಜುನ ಹಬ್ಬಳಿ, ವಾರ್ಡನ್ ಸುಮಿತ್ರ ಸೇರಿದಂತೆ ಅನೇಕರಿದ್ದರು.







