ಕಲಬುರಗಿ | ಜಿಲ್ಲಾಧಿಕಾರಿಗಳಿಂದ ಮಾಡಬೂಳ ಪ್ರಾಣಿ ಸಂಗ್ರಹಾಲಯದ ಕಾಮಗಾರಿ ವೀಕ್ಷಣೆ

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಸೋಮವಾರ ಕಾಳಗಿ ತಾಲೂಕಿನ ಮಾಡಬೂಳನಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಾಣದ ಹಂತದಲ್ಲಿರುವ ಮಾಡಬೂಳ ಪ್ರಾಣಿ ಸಂಗ್ರಹಾಲಯದ ಕಾಮಗಾರಿ ಪರಿಶೀಲಿಸಿದರು.
ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ ಅವರೊಂದಿಗೆ ಕಾಮಗಾರಿ ಸ್ಥಳ ಪರಿಶೀಲಿಸಿದ ಅವರು, ನಿಗದಿತ ಸಿವಿಲ್ ಕಾಮಗಾರಿ ಕೆಲಸಗಳನ್ನು ಕಾಲಮಿತಿಯಲ್ಲಿಯೇ ಪೂರ್ಣಗೊಳಿಸಬೇಕು. ಪ್ರಾಣಿ, ಪಕ್ಷಿಗಳಿಗೆ ಪೂರಕವಾದ ವಾತಾವರಣ ಇಲ್ಲಿ ಸೃಷ್ಠಿಸಬೇಕು ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೂ ಮುನ್ನ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ನಬಾರ್ಡ್ ಅನುದಾನದಿಂದ ನಿರ್ಮಿಸಲಾಗಿರುವ ಆಗ್ರೋ ಪ್ರೊಸೆಸಿಂಗ್ ಕೇಂದ್ರವನ್ನು ವೀಕ್ಷಿಸಿದರು. ಸ್ಥಳದಲ್ಲಿದ್ದ ರೈತರೊಂದಿಗೆ ಸಂವಾದ ನಡೆಸಿ ಎಫ್.ಪಿ.ಓ ಸದ್ಬಳಕೆ ಮಾಡಿಕೊಳ್ಳುವಂತೆ ರೈತರಿಗೆ ತಿಳಿ ಹೇಳಿದರು.
ನಂತರ ಸರ್ಕಾರಿ ಪ್ರೌಢ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ನೀಡಲಾಗುತ್ತಿರುವ ರುಚಿ-ಶುಚಿಯಾದ ಊಟ, ವಸತಿ ಕುರಿತು ಮಕ್ಕಳಿಂದ ಮಾಹಿತಿ ಪಡೆದರು.
ಕೋಡ್ಲಿ ನಾಡ ಕಚೇರಿಗೂ ಭೇಟಿ ನೀಡಿದ ಡಿ.ಸಿ. ಅವರು, ಕಾಲಮಿತಿಯಲ್ಲಿಯೇ ಅರ್ಜಿ ವಿಲೇವಾರಿ ಮಾಡಬೇಕೆಂದು ಎ.ಜೆ.ಎಸ್.ಕೆ ಸಿಬ್ಬಂದಿಗಳಿಗೆ ಸೂಚಿಸಿದರು. ಇದಲ್ಲದೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳೊಂದಿಗೆ ಚರ್ಚಿಸಿ ಅಲ್ಲಿ ನೀಡಲಾಗುತ್ತಿರುವ ಔಷದೋಪಚಾರದ ಬಗ್ಗೆ ಮಾಹಿತಿ ಪಡೆದುಕೊಂಡರು. ಕಾಳಗಿ ತಹಶೀಲ್ದಾರ್ ಕಚೇರಿಯ ಅಭಿಲೇಖಾಲಯ ಕೊಠಡಿಗೆ ಭೇಟಿ ನೀಡಿ ಕಂದಾಯ ದಾಖಲೆಗಳ ಸ್ಕ್ಯಾನಿಂಗ್ ಕಾರ್ಯ ವೀಕ್ಷಿಸಿದರು.
ಈ ವೇಳೆ ಕಾಳಗಿ ಗ್ರೇಡ್-1 ತಹಶೀಲ್ದಾರ್ ಪೃಥ್ವಿರಾಜ ಪಾಟೀಲ್, ತಾಲೂಕು ಪಂಚಾಯತ್ ಇ.ಓ ಬಸಲಿಂಗಪ್ಪ ಡಿಗ್ಗಿ, ನಬಾರ್ಡ್ ಅಧಿಕಾರಿ ಲೋಹಿತ್ ಸೇರಿದಂತೆ ಇತರೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







