ಕಲಬುರಗಿ | ಜಿಲ್ಲಾಧಿಕಾರಿಗಳಿಂದ ಹಳ್ಳಿಗಳಿಗೆ ಭೇಟಿ, ಕುಡಿಯುವ ನೀರು ಪೂರೈಕೆ ಪರಿಸ್ಥಿತಿ ಅವಲೋಕನ

ಕಲಬುರಗಿ : ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಬುಧವಾರ ಕಲಬುರಗಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಕೆ ಸ್ಥಿತಿಗತಿ ಕುರಿತಿ ಅವಲೋಕಿಸಿದರು.
ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾಫರಾಬಾದ ಗ್ರಾಮಕ್ಕೆ ತೆರಳಿದ ಡಿ.ಸಿ. ಅವರು, ಗ್ರಾಮದಲ್ಲಿನ ಆಶ್ರಯ ಕಾಲೋನಿ, ಪಂಡಿತ್ ದೀನ ದಯಾಳ ನಗರ, ಎಸ್.ಎಂ.ಕೃಷ್ಣ ಕಾಲೋನಿಗಳ ಮನೆ-ಮನೆಗಳಿಗೆ ಭೇಟಿ ನೀಡಿ ನೀರು ಪೂರೈಕೆ ಕುರಿತು ಸಾರ್ವಜನಿಕರಿಂದ ವಿಚಾರಿಸಿದರು. ನೀರು ಪೂರೈಕೆಯಲ್ಲಿ ವ್ಯತ್ಯವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದರಿಂದ ಪ್ರತಿ ವಾರ ನೀರು ಪೂರೈಕೆ ಮಾಡಬೇಕೆಂದು ಎಲ್ & ಟಿ ಅಧಿಕಾರಿಗಳಿಗೆ ಸೂಚಿಸಿದಲ್ಲದೆ ನೀರು ಮಿತವಾಗಿ ಬಳಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇನ್ನು ಜಾಫರಾಬಾದ್ ಗ್ರಾಮದಲ್ಲಿ ಜಲ್ ಜೀವನ ಮಿಷನ್ ಯೋಜನೆಯಡಿ ಮನೆ-ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲು ಈಗಾಗಲೆ ಡಿ.ಪಿ.ಆರ್. ಸಿದ್ದಪಡಿಸಿರುವ ಕಾರಣ ಯೋಜನೆ ಕೂಡಲೆ ಅನುಷ್ಠಾನ ಮಾಡಲಾಗುವುದು ಎಂದು ಗ್ರಾಮಸ್ಥರಿಗೆ ಡಿ.ಸಿ. ಇದೇ ಸಂದರ್ಭದಲ್ಲಿ ಅಭಯ ನೀಡಿದರು.
ನಂತರ ಸಾವಳಗಿ, ಹುಣಸಿಹಡಗಿಲ್ ಹಾಗೂ ಮಾಚನಾಳ ತಾಂಡಾ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಖಾಸಗಿ ಬೋರವೇಲ್, ಬಾವಿಗಳನ್ನು ಬಾಡಿಗೆ ಪಡೆದು ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಬೇಕು. 15ನೇ ಹಣಕಾಸು ಮತ್ತು ಸ್ಥಳೀಯ ಸಂನ್ಮೂಲಗಳ ಅನುದಾನ ಬಳಸಿಕೊಂಡು ಇದನ್ನು ಪ್ರಥಮಾದ್ಯತೆ ಮೇಲೆ ಮಾಡುವಂತೆ ಪಿಡಿಓ ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಮಾಚನಾಳ್ ತಾಂಡಾದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಮನೆಗಳಿಗೆ ಕಲ್ಪಿಸಿರುವ ಸಲ್ಲಿ ಸಂಪರ್ಕಗಳನ್ನು ವೀಕ್ಷಿಸಿದರು.
ಗರೂರು (ಬಿ) ಗ್ರಾಮದಲ್ಲಿನ ಬೋರವೆಲ್‌ಗಳ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಇರುವ ಕಾರಣ, ಈ ನೀರು ಯಾವುದೇ ಕಾರಣಕ್ಕು ಕುಡಿಯಲು ಸರಬರಾಜು ಮಾಡಬಾರದು. ಗ್ರಾಮದಲ್ಲಿನ ತೋಟದಲ್ಲಿನ ಬಾವಿಯನ್ನು ಬಾಡಿಗೆ ಪಡೆದು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೀರು ಸರಬರಾಜು ಮಾಡಬೇಕೆಂದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತೆ ಸಾಹಿತ್ಯಾ, ತಾಲೂಕು ಪಂಚಾಯತ್ ಇ.ಓ ಮುಹಮ್ಮದ್ ಸೈಯದ್ ಪಟೇಲ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಎ.ಇ.ಇ. ಜಗದೇವ ಜೀವಣಗಿ ಸೇರಿದಂತೆ ಗ್ರಾಮಗಳ ಪಿ.ಡಿ.ಓ ಮತ್ತು ಗ್ರಾಮ ಆಡಳಿತಾಧಿಕಾರಿಗಳು ಇದ್ದರು.