ಕಲಬುರಗಿ | ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ: 9 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಕಲಬುರಗಿ: ಮಹಾತ್ಮ ಗಾಂಧೀಜಿ ಅವರ 156ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಿದ್ಯಾರ್ಥಿ, ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪೃಶ್ಯತೆ ನಿವಾರಣೆಗೆ ನಡೆಸಿದ ಪ್ರಯೋಗಗಳು ಮೊದಲಾದ ವಿಷಯಗಳ ಕುರಿತು ಶಾಲಾ-ಕಾಲೇಜುಗಳ ಮಕ್ಕಳಿಗೆ ಆಯೋಜಿಸಿದ ಕಲಬುರಗಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೇಯಲ್ಲಿ ವಿಜೇತರಾದ 9 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಅಯ್ಕೆಯಾಗಿದ್ದಾರೆ.
ಗುರುವಾರ ಕಲಬುರಗಿ ನಗರದ ಕನ್ನಡ ಭವನದಲ್ಲಿ ಜರುಗಿದ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿದ್ದಕ್ಕಾಗಿ 9 ವಿದ್ಯಾರ್ಥಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಗಣ್ಯರು ಪ್ರಮಾಣ ಪತ್ರದ ಜೊತೆ ಕ್ರಮವಾಗಿ ಪ್ರಥಮ ಸ್ಥಾನಕ್ಕೆ 3,000 ರೂ., ದ್ವಿತೀಯ ಸ್ಥಾನಕ್ಕೆ 2,000 ರೂ. ಹಾಗೂ ತೃತೀಯ ಸ್ಥಾನಕ್ಕೆ 1,000 ರೂ. ನಗದು ಬಹುಮಾನ ನೀಡಿ ಸತ್ಕರಿಸಿದರು. ಜಿಲ್ಲಾ ಮಟ್ಟದ ವಿಜೇತರಾದ ಅಭ್ಯರ್ಥಿಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗೂ ಪರಿಗಣಿಸಿ ಅಲ್ಲಿ ವಿಜೇತರಾದವರಿಗೆ ರಾಜ್ಯ ಮಟ್ಟದ ಬಹುಮಾನ ನೀಡಲಾಗುತ್ತದೆ.
ಪ್ರೌಢ ಶಾಲೆ ವಿಭಾಗದಿಂದ ವಿಜೇತರಾದ ಚಿತ್ತಾಪುರ ತಾಲೂಕಿನ ರಾವೂರ ಅಲ್ಪಸಂಖ್ಯಾತರ ಮೋರಾರ್ಜಿ ದೇಸಾಯಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಪ್ರದೀಪ್ ಪಿ.ಕೆ. ಅವರಿಗೆ ಪ್ರಥಮ, ಕಲಬುರಗಿ ತಾಲೂಕಿನ ಫರತಾಬಾದ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಮಾಣಿಕಮ್ಮ ಎಸ್. ಅವರಿಗೆ ದ್ವಿತೀಯ ಹಾಗೂ ಚಿತ್ತಾಪುರ ತಾಲೂಕಿನ ಹೊನಗುಂಟಾ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಎಚ್. ಅವರಿಗೆ ತೃತೀಯ ಬಹುಮಾನ ನೀಡಲಾಯಿತು.
ಪದವಿ ಪೂರ್ವ ವಿಭಾಗದಿಂದ ಕಲಬುರಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (ಎಂ.ಪಿ.ಎಚ್.ಎಸ್.) ಕಲಾ ವಿಭಾಗದ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಭಾಗ್ಯಲಕ್ಷ್ಮೀ ತಂದೆ ಅಶೋಕ ಅವರಿಗೆ ಪ್ರಥಮ, ಕಲಬುರಗಿಯ ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಶಿವಾನಿ ತಂದೆ ಮಲ್ಲಿಕಾರ್ಜುನ ಅವರಿಗೆ ದ್ವಿತೀಯ ಹಾಗೂ ಚಿತ್ತಾಪುರ ತಾಲೂಕಿನ ರಾವೂರ ಅಲ್ಪಸಂಖ್ಯಾತರ ಮೋರಾರ್ಜಿ ದೇಸಾಯಿ ವಸತಿ ಕಾಲೇಜಿನ ವಿಜ್ಞಾನ ವಿಭಾಗದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ತೈರುಮ್‌ನಿಸಾ ತಂದೆ ಖಾಸಿಮ್‌ಸಾಬ್ ಅವರಿಗೆ ತೃತೀಯ ಸ್ಥಾನದ ಬಹುಮಾನ ನೀಡಿ ಸತ್ಕರಿಸಲಾಯಿತು.
ಅದೇ ರೀತಿ ಪದವಿ-ಸ್ನಾತಕೋತ್ತರ ವಿಭಾಗದಿಂದ ಆಳಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್ಸಿ. ಪ್ರಥಮ ವರ್ಷದ ವಿದ್ಯಾರ್ಥಿನಿ ಅಲಿಶಾ ಮಹೆಬೂಬ್ ತಂಬೋಲಿ ಅವರಿಗೆ ಪ್ರಥಮ, ಕಲಬುರಗಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್ಸಿ. ತೃತೀಯ ವರ್ಷದ ವಿದ್ಯಾರ್ಥಿನಿ ಶೃತಿ ನಾರಾಯಣ ಅವರಿಗೆ ದ್ವಿತೀಯ ಹಾಗೂ ಕಮಲಾಪೂರ ತಾಲೂಕಿನ ಮಹಾಗಾಂವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ. ತೃತೀಯ ವಿದ್ಯಾರ್ಥಿನಿ ಅನುಪ್ರಿಯಾ ಮಾಳಗೆ ಅವರಿಗೆ ತೃತೀಯ ಸ್ಥಾನ ಗಳಿಸಿದ್ದಕ್ಕಾಗಿ ಬಹುಮಾನ ನೀಡಲಾಯಿತು.







