ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರವಣ ಸಾಧನ ನೀಡಿದ ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್

ಕಲಬುರಗಿ: ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಸಂಬಂಧ ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ 93 ವರ್ಷದ ಹಿರಿಯ ನಾಗರಿಕರೊಬ್ಬರ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮಾನವೀಯತೆ ಮೆರೆದಿದ್ದಾರೆ.
ನಗರದ ಸಿದ್ದೇಶ್ವರ ನಗರದ ನಿವಾಸಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶಿವರಾಯ ಆಲೂರ್ ಅವರು ತಮ್ಮ ಪಿಂಚಣಿ ವಿಚಾರವಾಗಿ ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಕಿವಿ ಕೇಳಿಸುವಲ್ಲಿ ತೊಂದರೆ ಇರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ತಕ್ಷಣವೇ ಶ್ರವಣ ಸಾಧನ (ಹಿಯರಿಂಗ್ ಏಡ್) ಕಿಟ್ ಒದಗಿಸಿ ನೆರವಾದರು.
ಜಿಲ್ಲಾಧಿಕಾರಿಗಳ ತ್ವರಿತ ಸ್ಪಂದನೆ ಹಾಗೂ ಮಾನವೀಯ ಕಾಳಜಿಗೆ ಹಿರಿಯ ನಾಗರಿಕ ಶಿವರಾಯ ಆಲೂರ್ ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ, ಶಿವರಾಯ ಆಲೂರ್ ಸಲ್ಲಿಸಿದ ಪಿಂಚಣಿ ಸಂಬಂಧಿತ ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
Next Story




