ಕಲಬುರಗಿ| ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಚಾಲನೆ

ಕಲಬುರಗಿ: ಕ್ರೀಡಾಕೂಟ ಕೇವಲ ಸೋಲು-ಗೆಲುವಿಗೆ ಸೀಮಿತವಾಗಿಲ್ಲ. ಅದು ಆರೋಗ್ಯದ ದೃಷ್ಠಿಯಿಂದಲು ಮತ್ತು ವೃತ್ತಿಯಲ್ಲಿ ಸ್ಥಿರತೆ ಕಾಪಾಡಲು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದರು.
ಶುಕ್ರವಾರ ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಕ್ರೀಡಾಕೂಟ-2025ಕ್ಕೆ ಚಾಲನೆ ನೀಡಿ ಮಾತನಾಡಿದ ಬಿ.ಫೌಝಿಯಾ ತರನ್ನುಮ್, ದಿನದ 24 ಗಂಟೆ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗಳು ಒತ್ತಡದ ಮಧ್ಯೆಯು ಕ್ರೀಡಾಕೂಟದಲ್ಲಿ ಹುಮ್ಮಸ್ಸಿನಿಂದ ಭಾಗವಹಿಸಿರುವುದು ನಿಜಕ್ಕೂ ಸಂತೋಷದ ವಿಷಯ. ಸರಕಾರಿ ನೌಕರರು, ಪೊಲೀಸರ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ಅದರಂತೆ ಕಾರ್ಯನಿರ್ವಹಿಸಲು ದೈಹಿಕ ಮತ್ತು ಮಾನಸಿಕವಾಗಿ ಸಾರ್ವಜನಿಕರ ಸೇವಕರಾದ ನಾವು ಸದಾ ಸದೃಢವಾಗಿರಬೇಕಿದೆ ಎಂದರು.
ಒತ್ತಡದ ಮಧ್ಯೆ ಪೊಲೀಸ್ ಸಿಬ್ಬಂದಿಗಳು ಕ್ರೀಡಾ ತರಬೇತಿ ಪಡೆದು, ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ಅತ್ಯುತ್ತಮ ನಡೆಯಾಗಿದೆ. ಕ್ರೀಡಾಸ್ಫೂರ್ತಿಯೊಂದಿಗೆ ಆಟವಾಡಿ, ಗೆಲುವು ಸಾಧಿಸಬೇಕು. ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನದತ್ತಲೂ ಗಮನ ಹರಿಸಬೇಕು. ಪೊಲೀಸರ ಕುಟುಂಬದವರಿಗೆ ಆಟೋಟ ಸ್ಪರ್ಧೆ ಏರ್ಪಡಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಎಸ್.ಪಿ. ಮಹೇಶ್ ಮೇಘಣ್ಣನವರ್ ಸೇರಿದಂತೆ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಶಹಾಬಾದ್ ಡಿ.ವೈ.ಎಸ್.ಪಿ ಶಂಕರಗೌಡ ಪಾಟೀಲ್ ಅವರು ವಂದಿಸಿದರು. ಕಳೆದ ಆರು ವರ್ಷದ ಕ್ರೀಡಾಕೂಟದಲ್ಲಿ ಸರ್ವಶ್ರೇಷ್ಠ ಕ್ರೀಡಾಪಟು ಉದಯಕುಮಾರ ಕ್ರೀಡಾಜ್ಯೋತಿ ಬೆಳಗಿಸಿದರು.
ಪರೇಡ್ ಕಮಾಂಡರ್ ಡಿ.ಎ.ಆರ್ ಘಟಕದ ಆರ್.ಪಿ.ಐ ಮಲ್ಲಯ್ಯ ಆರ್. ಕವಾಯತು ಮುನ್ನಡೆಸಿದರು. ಆರ್.ಎಸ್.ಐ ರವಿ ಪೊಲೀಸ್ ಪಾಟೀಲ್ ನಾಯಕತ್ವದ ಡಿ.ಎ.ಆರ್ ಘಟಕ, ಆರ್.ಎಸ್.ಐ. ಸಂತೋಷ ನಾಯಕತ್ವದ ಆಳಂದ ಉಪವಿಭಾಗ, ಪಿ.ಎಸ್.ಐ ಸಿದ್ಧಲಿಂಗ ನಾಯಕತ್ವದ ಶಹಾಬಾದ್ ಉಪ ವಿಭಾಗ, ಪಿ.ಎಸ್.ಐ ಚಿದಾನಂದ ಕಾಶಪ್ಪಗೋಳ ನಾಯಕತ್ವದ ಚಿಂಚೋಳಿ ಉಪ ವಿಭಾಗ, ಪಿ.ಎಸ್.ಐ ಶ್ರೀಶೈಲ ಅಂಬಾಟಿ ನಾಯಕತ್ವದ ಗ್ರಾಮೀಣ ಉಪ ವಿಭಾಗ, ಪಿ.ಎಸ್.ಐ ಇಂದುಮತಿ ಪಾಟೀಲ್ ನಾಯಕತ್ವದ ಮಹಿಳಾ ವಿಭಾಗಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಮೂರು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ. ನವೆಂಬರ್ 30ಕ್ಕೆ ಸಮಾರೋಪ ಮತ್ತು ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ.







