Kalaburagi | ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆ : ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿಗೆ ನಿರ್ಧಾರ

ಕಲಬುರಗಿ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದಿರುವ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿಗೆ ಜಿಲ್ಲಾಧಿಕಾರಿ ಇಕ್ರಮ‌್ ಶರೀಫ್ ನೇತೃತ್ವದಲ್ಲಿ ಶುಕ್ರವಾರ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಭೆಯಲ್ಲಿ ನಿರ್ಧರಿಸಿದೆ.
ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಪ್ರತಿ ಕ್ವಿಂಟಾಲ್ ಗೆ 7,721 ರೂ. ದರ ನಿಗದಿ ಮಾಡಿದ್ದು, ಪ್ರತಿ ಎಕರೆಗೆ 4 ಕ್ವಿಂಟಲ್ ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ವರೆಗೆ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಜಿಲ್ಲೆಯ ಪ್ರತಿ ತಾಲೂಕಿಗೆ ಒಂದರಂತೆ ಒಟ್ಟು 11 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ (PACS) ಮೂಲಕ ಪ್ರಕ್ರಿಯೆಯನ್ನು ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯ ಸರ್ಕಾರದ ನಿರ್ದೇಶನದಂತೆ ಕಲಬುರಗಿ ಜಿಲ್ಲೆಯಾದ್ಯಂತ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿಗೆ ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿಯಮಿತ (KOF) ಸಂಸ್ಥೆಯನ್ನು ರಾಜ್ಯ ಖರೀದಿ ಸಂಸ್ಥೆಯನ್ನಾಗಿ ನೇಮಿಸಲಾಗಿದ್ದು, ನೋಂದಣಿ ಕಾರ್ಯ ಜೂನ್ 26ರ ವರೆಗೆ ಹಾಗೂ ಖರೀದಿ ಪ್ರಕ್ರಿಯೆಯು ಜುಲೈ 6ರ ವರೆಗೆ ನಡೆಯಲಿದೆ.
ಪ್ರತಿಯೊಂದು ಖರೀದಿ ಕೇಂದ್ರಗಳಲ್ಲಿ ರೈತರ ನೊಂದಣಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ UIDAI ಬಯೋ ಮೇಟ್ರಿಕ್ ಪಡೆಯುವುದು ಕಡ್ಡಾಯವಾಗಿರುತ್ತದೆ. ರೈತರಿಂದ ಖರೀದಿಸಿದ ಉತ್ಪನ್ನದ ಮೌಲ್ಯವನ್ನು ಡಿ.ಬಿ.ಟಿ ಪೋರ್ಟಲ್ ಮೂಲಕ ರೈತರ ಬ್ಯಾಂಕ್ ಖಾತೆಗೆ ಹಣ ಪಾವತಿಸಲಾಗುವುದು.
ಜಿಲ್ಲೆಯ ರೈತ ಭಾಂದವರು ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (PACS) ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಹಿಂಗಾರು ಹಂಗಾಮಿನಲ್ಲಿ ತಾವು ಬೆಳೆದ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ನಿಗದಿತ ಅವಧಿಯಲ್ಲಿ ಮಾರಾಟಕ್ಕೆ ನೊಂದಾಯಿಸಿಕೊಂಡು ಮಾರಾಟ ಮಾಡಲು ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಕರ್ನಾಟಕ ಸರ್ಕಾರ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿಯಮಿತ (KOF) ಸಂಸ್ಥೆ- 9591812142 ಸಂಪರ್ಕಿಸಲು ಕೋರಿದೆ.






