ಕಲಬುರಗಿ | ಮಾರ್ಚ್ ಮಾಸಾಂತ್ಯಕ್ಕೆ ಜಿಲ್ಲಾವಾರು ಅಭಿಪ್ರಾಯ ಸಂಗ್ರಹಣೆ : ಪ್ರೊ.ಎಂ.ಗೋವಿಂದರಾವ್

ಕಲಬುರಗಿ : ಹಿಂದುಳಿದ ಪ್ರದೇಶದಲ್ಲಿನ ಇದುವರೆಗೆ ಸಾಧಿಸಿದ ಪ್ರಗತಿ ಆಧಾರದ ಮೇಲೆ ಮುಂದೆ ಮಾಡಬೇಕಾದ ಅಭಿವೃದ್ಧಿಗೆ ಹೊಸದಾಗಿ ಸೂಚ್ಯಂಕ ನಿಗದಿಪಡಿಸುವ ನಿಟ್ಟಿನಲ್ಲಿ ಬರುವ ಮಾರ್ಚ್ ಒಳಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಮಿತಿ ಸಂಚರಿಸಿ ಜಿಲ್ಲಾವಾರು ಅಭಿಪ್ರಾಯ ಸಂಗ್ರಹಣೆ ಮೂರ್ಣಗೊಳಿಸಲಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೋ.ಎಂ.ಗೋವಿಂದರಾವ್ ಹೇಳಿದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯ ಅಭಿಪ್ರಾಯ ಸಂಗ್ರಹಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಡಿ.ಎಂ.ನಂಜುಂಡಪ್ಪ ಅವರ ವರದಿಯಲ್ಲಿ 35 ಇಂಡೆಕ್ಸ್ ಉಲ್ಲೇಖ ಮಾಡಲಾಗಿತ್ತು. ಇದರ ಆಧಾರದ ಮೇರೆಗೆ ಇಂದಿನ ಕಾಲಘಟಕ್ಕೆ ಅನುಗುಣವಾಗಿ ಇನ್ನು ಹೆಚ್ಚಿನ ಸೂಚ್ಯಂಕಗಳನ್ನು ಸೇರಿಸಿ ಸರಕಾರಕ್ಕೆ ಸೆಪ್ಟೆಂಬರ್ ಒಳಗಾಗಿ ವರದಿ ಸಲ್ಲಿಸಲಾಗುತ್ತದೆ ಎಂದರು.
ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ವಯ ಇದೂವರೆಗೆ ಪ್ರದೇಶಕ್ಕೆ ಬಿಡುಗಡೆಯಾದ ಸಾವಿರಾರು ಕೋಟಿ ರೂ. ಹಣದಿಂದ ಸಾಧಿಸಿರುವ ಪ್ರಗತಿಯ ನಡುವೆಯೂ ತಲಾ ಆದಾಯ ಕುಸಿದಿದೆ. ಆದಾಯ ಮತ್ತು ಫಲಿತಾಂಶದ ಅಸ್ಥಿರಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ವರದಿ ನೀಡಲಾಗುತ್ತದೆ. ವಿಶೇಷವಾಗಿ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಿರುವುದರಿಂದ ಇದರ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗುವುದು ಎಂದರು.
ಕಳೆದ ಸೆಪ್ಟೆಂಬರ್ ನಿಂದಲೇ ಸಮಿತಿ ಕೆಲಸ ಆರಂಭಿಸಿದೆ. ಪ್ರಶ್ನಾವಳಿಗಳನ್ನು ಇಲಾಖೆಗಗೆ ಕಳುಹಿಸಿದೆ. ಜಿಲ್ಲಾವಾರು ವಿಶ್ಲೇಷಣೆ ಕಾರ್ಯ ಮುಗಿಯುವ ಹಂತದಲ್ಲಿದ್ದು, ತಾಲೂಕುವಾರು ಮಾಡಬೇಕಿದೆ. ವಿಭಾಗ ಮಟ್ಟದಲ್ಲಿ ನಾನು ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿಯ ಸದಸ್ಯರು ಹೋಗಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಮಾಡಲಿದ್ದಾರೆ. ಇದರ ಜೊತೆಗೆ ದತ್ತಾಂಶ ಸಂಗ್ರಹಣ ಕಾರ್ಯ ಭರದಿಂದ ನಡೆಯುತ್ತಿದೆ ಎಂದ ಪ್ರೊ.ಎಂ.ಗೋವಿಂದರಾವ್ ಅವರು, ಸಮಿತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸದಸ್ಯರಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ ವಾಸುದೇವ ಸೇಡಂ ಅವರನ್ನು ನೇಮಕ ಮಾಡಲಾಗಿತ್ತು, ಅವರು ಅನಾರೋಗ್ಯ ಕಾರಣ ನೀಡಿ ರಾಜೀನಾಮೆ ನೀಡಿದ್ದರಿಂದ ಈ ಭಾಗದಿಂದಲೆ ಓರ್ವ ಸದಸ್ಯರನ್ನು ಆಯ್ಕೆ ಮಾಡಲಾಗುವುದು ಎಂದರು.
ನಂಜುಂಡಪ್ಪ ವರದಿಯಂತೆ ಕ.ಕ. ಭಾಗದಲ್ಲಿ 15 ಸಾವಿರ ಕೋಟಿ ಖರ್ಚು :
ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರದೇಶಾಭಿವೃದ್ಧಿ ಮಂಡಳಿಯ ನಿರ್ದೇಶಕ ಡಿ.ಚಂದ್ರಶೇಖರಯ್ಯ ಮಾತನಾಡಿ, ಡಾ.ಡಿ.ಎಂ.ನಂಜುಂಡಪ್ಪ ಅವರ ವರದಿಯಂತೆ 2007-08 ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಎಸ್.ಡಿ.ಪಿ. ಯೋಜನೆಯಡಿ 45 ಸಾವಿರ ಕೋಟಿ ರೂ. ಅನುದಾನ ಖರ್ಚು ಮಾಡಿದ್ದು, ಇದರಲ್ಲಿ 15,000 ಕೋಟಿ ರೂ. ಕಲ್ಯಾಣ ಕರ್ನಾಟಕ ಭಾಗಕ್ಕೆ ಖರ್ಚು ಮಾಡಿದೆ. ಇನ್ನು 371ಜೆ ಅನ್ವಯ ರಚನೆಗೊಂಡ ಕೆ.ಕೆ.ರ್.ಡಿ.ಬಿ. ಮಂಡಳಿಗೆ ಇದೂವರೆಗೆ 19,000 ಕೋಟಿ ರೂ. ಹಂಚಿಕೆ ಮಾಡಿ 13,000 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 11,000 ಕೋಟಿ ರೂ. ಖರ್ಚು ಮಾಡಲಾಗಿದೆ. ಕಲಬುರಗಿ ವಿಮಾನ ನಿಲ್ದಾಣ, ಜಯದೇವ ಆಸ್ಪತ್ರೆ ಇದೇ ಅನುದಾನದ ಯೋಜನೆಗಳಾಗಿವೆ ಎಂದರು.
ಇನ್ನು ರಾಜ್ಯದಾದ್ಯಂತ 2.80 ಲಕ್ಷ ಹುದ್ದೆ ಖಾಲಿ ಇದ್ದು, ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ 17 ಸಾವಿರ ಹುದ್ದೆಗಳಿವೆ. ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿಯೇ 371ಜೆ ಅನುಷ್ಠಾನಾಧಿಕಾರಿ ಸಮಿತಿ ಇರುವ ಕಾರಣ, ಹುದ್ದೆ ಭರ್ತಿಗೂ ವೇಗ ಸಿಗಲಿದೆ ಎಂದರು.
ಸಮಿತಿ ಸದಸ್ಯರಾದ ಡಾ.ಸೂರ್ಯನಾರಾಯಣ ಮುಂಗಿಲ್ ಹಿಲ್ಲೆಮನಿ, ಡಾ.ಎಸ್.ಟಿ.ಬಾಗಲಕೋಟೆ, ಕೆ ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ.ಸುಂದರೇಶ ಬಾಬು ಇದ್ದರು.







