Kalaburagi | ಬೆಳೆ ವಿಮೆ ನೋಂದಣಿಗೆ ವಿಳಂಬ ಬೇಡ: ರೈತರಿಗೆ ಡಿಸಿ ಇಕ್ರಮ್ ಶರೀಫ್ ಕರೆ

ಕಲಬುರಗಿ: 2026–27ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಕುರಿತು ರೈತರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಬೆಳೆ ವಿಮೆ ಸಂಸ್ಥೆಯ ವತಿಯಿಂದ ಗ್ರಾಮವಾರು ಜಾಗೃತಿ ವಾಹನಗಳ ವಿಶೇಷ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಜಾಗೃತಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.
ರೈತರು ಬಿತ್ತನೆ ಮಾಡುವುದಷ್ಟೇ ಅಲ್ಲದೆ, ಬಿತ್ತಿದ ಬೆಳೆಯನ್ನು ಕಡ್ಡಾಯವಾಗಿ ಬೆಳೆ ವಿಮೆ ವ್ಯಾಪ್ತಿಗೆ ನೋಂದಾಯಿಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಅವರು ರೈತರಿಗೆ ಮನವಿ ಮಾಡಿದರು.
ಕೃಷಿ ಇಲಾಖೆ ಹಾಗೂ ಬೆಳೆ ವಿಮೆ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಜಾಗೃತಿ ವಾಹನಗಳನ್ನು ಕಳುಹಿಸಿ ಯೋಜನೆಯ ಮಹತ್ವ, ನೋಂದಣಿ ವಿಧಾನ ಹಾಗೂ ರೈತರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯು ಬಿತ್ತನೆ ಪೂರ್ವದಿಂದ ಹಿಡಿದು ಬೆಳೆ ಕಟಾವಿನ ನಂತರದವರೆಗೂ ಸಂಭವಿಸಬಹುದಾದ ವಿವಿಧ ನೈಸರ್ಗಿಕ ವಿಕೋಪಗಳಿಂದ ರೈತರನ್ನು ಆರ್ಥಿಕವಾಗಿ ರಕ್ಷಿಸುವ ಉದ್ದೇಶ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಬಿತ್ತನೆ ವಿಫಲತೆ, ಮಧ್ಯಂತರ ಬೆಳೆ ಹಾನಿ, ಸ್ಥಳೀಯ ವಿಕೋಪಗಳು, ಬೆಳೆ ಕಟಾವು ಪ್ರಯೋಗದ ಆಧಾರದ ಮೇಲೆ ಉಂಟಾಗುವ ನಷ್ಟ ಹಾಗೂ ಕಟಾವಿನ ನಂತರ ಸಂಭವಿಸುವ ಹಾನಿಗೂ ಯೋಜನೆಯಡಿ ಪರಿಹಾರ ದೊರೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಕಲಬುರಗಿ ಹಾಗೂ ಸೇಡಂ ತಾಲೂಕುಗಳ ಉಪ ಕೃಷಿ ನಿರ್ದೇಶಕರು, ಇಂಡಸ್ ಇಂಡ್ ಜನರಲ್ ಇನ್ಶೂರೆನ್ಸ್ ಕಂಪನಿಯ ಪ್ರತಿನಿಧಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.






