Kalaburagi | ನ.1ರಂದು ದೊಡ್ಡಪ್ಪ ಅಪ್ಪಾಜಿ, ದಾಕ್ಷಾಯಣಿ ಅವ್ವಾಜಿ ಜನ್ಮದಿನೋತ್ಸವ ಆಚರಣೆ
ನಾಣ್ಯ, ರುದ್ರಾಕ್ಷಿಗಳಿಂದ ತುಲಾಭಾರ; ಡಾ.ಅವ್ವಾಜಿ ಜೀವನಚರಿತ್ರೆ ಪುಸ್ತಕ ಬಿಡುಗಡೆ

ಕಲಬುರಗಿ : ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಹಾಗೂ ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜಿ ಅವರ ಜನ್ಮದಿನೋತ್ಸವವನ್ನು ನ.1ರಂದು ರಾಜ್ಯೋತ್ಸವದ ಅಂಗವಾಗಿ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ಆಚರಿಸಲಾಗುವುದು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಶುಕ್ರವಾರ ನೀಡಿದ ಹೇಳಿಕೆಯಲ್ಲಿ, ನವೆಂಬರ್ 1ರಂದು ಜನಿಸಿದ ದೊಡ್ಡಪ್ಪ ಅಪ್ಪಾಜಿ ಹಾಗೂ ನವೆಂಬರ್ 22ರಂದು ಜನಿಸಿದ ದಾಕ್ಷಾಯಣಿ ಅವ್ವಾಜಿ ಅವರ ಜನ್ಮದಿನಗಳನ್ನು ಒಂದೇ ದಿನ ಆಚರಿಸಲು ಸಂಘ ಹಾಗೂ ದೇವಾಲಯದ ಭಕ್ತರು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ದೇವಾಲಯದಲ್ಲಿ ಲಿಂಗಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಸಂಜೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಶರಣಬಸವ ವಿಶ್ವವಿದ್ಯಾಲಯ, ಅಖಿಲ ಭಾರತ ಶಿವಾನುಭವ ಮಂಟಪ, ಜಿಲ್ಲಾ ವೀರಶೈವ ಸಮಾಜ ಹಾಗೂ ಶರಣಬಸವೇಶ್ವರ ಸಂಸ್ಥಾನದ ಭಕ್ತಾದಿಗಳ ಸಂಯುಕ್ತಾಶ್ರಯದಲ್ಲಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಅನುಭವ ಮಂಟಪದಲ್ಲಿ ಮುಖ್ಯ ಸಮಾರಂಭ ಜರುಗಲಿದೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ಶ್ರೀಶೈಲ ಸಾರಂಗಮಠದ ಜಗದ್ಗುರು ಡಾ. ಸಾರಂಗದರ ದೇಶಿಕೇಂದ್ರ ಮಹಾಸ್ವಾಮಿಗಳು ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಚೌಡಾಪುರಿ ಹಿರೇಮಠದ ರಾಜಶೇಖರ ಮಹಾಸ್ವಾಮಿಗಳು, ಮುಗಳನಾಗವಿಯ ಕಟ್ಟಿಮನಿ ಹಿರೇಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಹಾಗೂ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಉಪಸ್ಥಿತರಿರುವರು.
ಜನ್ಮದಿನೋತ್ಸವದ ಅಂಗವಾಗಿ ದೊಡ್ಡಪ್ಪ ಅಪ್ಪಾಜಿ ಹಾಗೂ ದಾಕ್ಷಾಯಣಿ ಅವ್ವಾಜಿ ಅವರಿಗೆ ಪ್ರತ್ಯೇಕವಾಗಿ ನಾಣ್ಯ ಮತ್ತು ಪವಿತ್ರ ರುದ್ರಾಕ್ಷಿಗಳಿಂದ ತುಲಾಭಾರ ಸಮರ್ಪಿಸಲಾಗುವುದು. ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಅವರು ನಾಣ್ಯಗಳಿಂದ ತುಲಾಭಾರ ನೆರವೇರಿಸಲಿದ್ದು, ಮಾಣಿಕಮ್ಮ ಹಾಗೂ ಮಡಿವಾಳಯ್ಯ ಅವರು ರುದ್ರಾಕ್ಷಿಗಳಿಂದ ತುಲಾಭಾರ ಸಮರ್ಪಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಅವರು ರಚಿಸಿರುವ ‘ಡಾ. ಅವ್ವಾಜಿಯವರ ಚಿತ್ರಾತ್ಮಕ ಜೀವನ ಚರಿತ್ರೆ’ ಪುಸ್ತಕ ಬಿಡುಗಡೆಗೊಳ್ಳಲಿದೆ. ಸಂಘ ಹಾಗೂ ವಿಶ್ವವಿದ್ಯಾಲಯದ ಅಧೀನದ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಭಕ್ತಾದಿಗಳು ಉಭಯ ಮಹನೀಯರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ.






