Kalaburagi | ಶೀಘ್ರದಲ್ಲೇ ಕಾಂಗ್ರೆಸ್‌ಗೆ ಡಾ.ಫಾರೂಕ್ ಮಣ್ಣೂರ ಸೇರ್ಪಡೆ : ಜಗದೇವ ಗುತ್ತೇದಾರ

ಕಲಬುರಗಿ : ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಫಾರುಕ್ ಮಣ್ಣೂರ ಅವರು ವೈದ್ಯಕೀಯ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಅಲ್ಪಾವಧಿಯಲ್ಲೇ ಜನರ ವಿಶ್ವಾಸ ಗಳಿಸಿದ್ದು, ಶೀಘ್ರದಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಎಂಎಲ್ಸಿ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ತಿಳಿಸಿದ್ದಾರೆ.
ನಗರದಲ್ಲಿ ಡಾ. ಫಾರುಕ್ ಮಣ್ಣೂರ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ 39ನೇ ವರ್ಷದ ಜನ್ಮದಿನದ “ಸೇವಾ ಸಂಕಲ್ಪ ದಿನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಜನಪರ, ಬಡವರ ಪರ ಹಾಗೂ ಹಿಂದುಳಿದವರ ಪರ ಕಾಳಜಿಯುಳ್ಳ ವ್ಯಕ್ತಿಗಳು ರಾಜಕೀಯಕ್ಕೆ ಬಂದರೆ ಸಮಾಜಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತವೂ ಬಡವರ ಪರವಾಗಿದ್ದು, ಡಾ. ಫಾರುಕ್ ಮಣ್ಣೂರ ಅವರಂತಹ ಸಮಾಜಸೇವಕರ ಅಗತ್ಯ ಪಕ್ಷಕ್ಕಿದೆ” ಎಂದು ಹೇಳಿದರು.
ಜನ್ಮದಿನದ ಅಂಗವಾಗಿ ಅಭಿಮಾನಿ ಬಳಗವು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಸುಕನ್ಯಾ ಸಮೃದ್ಧಿ ಯೋಜನೆಯಡಿ 200 ಹೆಣ್ಣುಮಕ್ಕಳ ಖಾತೆಗಳಿಗೆ 18 ವರ್ಷಗಳವರೆಗೆ ಕಂತು ಪಾವತಿಸುವ ಯೋಜನೆ ಘೋಷಿಸಲಾಯಿತು. 2025ನೇ ಸಾಲಿನಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ 10 ವಿದ್ಯಾರ್ಥಿನಿಯರಿಗೆ ತಲಾ ₹10 ಸಾವಿರ ವಿದ್ಯಾರ್ಥಿವೇತನ ವಿತರಿಸಲಾಯಿತು.
ಇದೇ ವೇಳೆ ಐಎನ್‌ಎಸ್ ಹಾಗೂ ಎಂಎಸ್ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಜಿಲ್ಲೆಯ 15 ವಿಧವೆಯರಿಗೆ ಹೊಲಿಗೆ ಯಂತ್ರ ವಿತರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 11 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಫಾರುಕ್ ಮಣ್ಣೂರ, “ಪ್ರತಿಯೊಬ್ಬ ಪೋಷಕರು ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ವಿದ್ಯಾವಂತ ಹೆಣ್ಣುಮಗು ಒಂದು ಕುಟುಂಬವನ್ನೇ ಶಿಕ್ಷಣದತ್ತ ಕೊಂಡೊಯ್ಯುವ ಶಕ್ತಿ ಹೊಂದಿದೆ” ಎಂದು ಹೇಳಿದರು.
ಮಣ್ಣೂರ ಆಸ್ಪತ್ರೆ ಆರಂಭವಾದ ಬಳಿಕದಿಂದಲೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವುದಾಗಿ ತಿಳಿಸಿದ ಅವರು, “ಕಲಬುರಗಿ ಜಿಲ್ಲೆಯ 750 ಕ್ಷಯರೋಗಿಗಳನ್ನು ದತ್ತು ಪಡೆದು ಪೌಷ್ಠಿಕ ಆಹಾರ ವಿತರಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಉಚಿತ ಕುಡಿಯುವ ನೀರಿನ ಪೂರೈಕೆ, ಮಧುಮೇಹ ಮುಕ್ತ ಕಲಬುರಗಿ ಅಭಿಯಾನ, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಅನೇಕ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ” ಎಂದರು.
ಸುಕನ್ಯಾ ಸಮೃದ್ಧಿ ಯೋಜನೆಯಡಿ ಸುಮಾರು 650 ಬಡ ಹೆಣ್ಣುಮಕ್ಕಳ ಖಾತೆಗಳಿಗೆ 18 ವರ್ಷಗಳವರೆಗೆ ಆಸ್ಪತ್ರೆಯ ವತಿಯಿಂದ ಕಂತು ಪಾವತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಡಾ. ಫಾರುಕ್ ಮಣ್ಣೂರ ಅವರ ಜನ್ಮದಿನದ ಪ್ರಯುಕ್ತ ಅಭಿಮಾನಿ ಬಳಗವು ನಗರದ ವೃದ್ಧಾಶ್ರಮದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸರ್ಕಾರಿ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ 200 ಹೆಣ್ಣುಮಕ್ಕಳ ಸುಕನ್ಯಾ ಸಮೃದ್ಧಿ ಖಾತೆಗಳ ಪಾಸ್‌ಬುಕ್ ವಿತರಣೆ, 10 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ 10 ವಿಧವೆಯರಿಗೆ ಹೊಲಿಗೆ ಉಪಕರಣಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮೀ ಶಕ್ತಿ ಪೀಠದ ಡಾ. ಅಪ್ಪಾರಾವ ದೇವಿ ಮುತ್ಯಾ, ಜನಾಬ್ ಮೌಲಾನಾ ಅಲ್ತಾಫ್ ಪಟೇಲ್ ಸಾಹೇಬ್, ಗಂಜಲ್‌ಖೇಡದ ಮೌನೇಶ್ವರ ಮಠದ ಪೂಜ್ಯ ಶ್ರೀ ನಾಗೇಶ್ ಮಾಣಿಕ ಅಪ್ಪಾಜಿ, ನಿಲಕಂಠರಾವ ಮೂಲಗೆ, ಡಾ. ಎಸ್.ಬಿ. ಕಾಮರಡ್ಡಿ, ಫರಾಜುಲ್ ಇಸ್ಲಾಂ, ಮರೆಪ್ಪ ಹಳ್ಳಿ, ಡಾ. ರವಿ ಚವ್ಹಾಣ, ಶರಣಬಸಪ್ಪ ಖೇಣಿ, ಬಾಬುಮಿಯ್ಯ ಮಣ್ಣೂರ, ಡಾ. ಮತೀನ್, ಎಂ.ಡಿ. ಇಸ್ಮಾಯಿಲ್, ಜಹೀರ್ ಶಹಾಬಾದ್, ರಾಜೇಶ್ ಯಾನಾಗುಂಟಿ, ಆಮೀರ್ ನಿಂಬಾಳಕರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.






