ಡಾ. ಪ್ರಣವಾನಂದ ಶ್ರೀಗಳಿಗೆ ಕಲಬುರಗಿ ಈಡಿಗ, ಬಿಲ್ಲವರಿಂದ ಗೌರವ ಸನ್ಮಾನ

ಕಲಬುರಗಿ: ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ 26 ಪಂಗಡಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಐತಿಹಾಸಿಕ ಪಾದಯಾತ್ರೆ ಕೈಗೊಂಡಿರುವ ಡಾ. ಪ್ರಣವಾನಂದ ಶ್ರೀಗಳು ಗಂಗಾವತಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಲಬುರಗಿಯ ಈಡಿಗ ನಾಯಕರು ಭವ್ಯ ಸ್ವಾಗತ ಕೋರಿಸಿ ಗೌರವಪೂರ್ವಕವಾಗಿ ಸನ್ಮಾನಿಸಿದರು.
ಚಿತ್ತಾಪುರದ ಕರದಾಳದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಜನವರಿ 6ರಂದು ಆರಂಭಗೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ನಡೆಯುವ ಸುಮಾರು 700 ಕಿ.ಮೀ ದೂರದ ಪಾದಯಾತ್ರೆ, 16 ದಿನಗಳ ನಂತರ ಜನವರಿ 21ರಂದು ಗಂಗಾವತಿ ಪಟ್ಟಣ ತಲುಪಿತು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ವತಿಯಿಂದ ಡಾ. ಪ್ರಣವಾನಂದ ಶ್ರೀಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ವಿ. ಗುತ್ತೇದಾರ್, ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಟ್ರಸ್ಟಿಗಳಾದ ಮಹಾದೇವ ಗುತ್ತೇದಾರ್, ವೆಂಕಟೇಶ ಎಂ. ಕಡೇಚೂರ್, ಪ್ರವೀಣ ಜತ್ತನ್, ಅಂಬಯ್ಯ ಗುತ್ತೇದಾರ್ (ಇಬ್ರಾಹಿಂಪುರ್), ಈ. ತಿಮ್ಮಪ್ಪ (ಗಂಗಾವತಿ), ಡಾ. ಸದಾನಂದ ಪೆರ್ಲ, ಸುರೇಶ್ ಗುತ್ತೇದಾರ್ (ಮಟ್ಟೂರು), ನಾರಾಯಣ ಗುತ್ತೇದಾರ್ (ಬೆಳಗಾವಿ), ಸಂತೋಷ್ ಚೌಧರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ವೇಳೆ ಸಮಾಜದ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಚ್.ಆರ್. ಶ್ರೀನಾಥ್ ಅವರನ್ನು ಸಹ ಗೌರವಿಸಿ ಸನ್ಮಾನಿಸಲಾಯಿತು.







