Kalaburagi | ಡಿಜಿಟಲ್ ಗ್ರಂಥಾಲಯದ ಯೋಜನಾ ಸಲಹೆಗಾರರಾಗಿ ಡಾ.ರಾಘವೇಂದ್ರ ಬೋನಾಳ ನೇಮಕ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಘವೇಂದ್ರ ಬೋನಾಳ ಅವರು ಮಹಾರಾಷ್ಟ್ರದ ಪುಣೆ ಮೂಲದ ಕ್ಯಾಲಿಯೋನಿಕ್ಸ್ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಡಿಜಿಟಲ್ ಗ್ರಂಥಾಲಯ, ಜ್ಞಾನ ನಿರ್ವಹಣೆ ಹಾಗೂ ಮಾಹಿತಿ ವಿಜ್ಞಾನ ಯೋಜನೆಗಳ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.
ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಆರಂಭವಾದ ಬಳಿಕ ದೊರೆತಿರುವ ಮೊದಲ ಪ್ರಮುಖ ಸಲಹಾ ಯೋಜನೆ ಇದಾಗಿದ್ದು, ಸುಮಾರು 25 ಲಕ್ಷ ರೂ. ಮೌಲ್ಯದ ಅಂತರರಾಷ್ಟ್ರೀಯ ಆಫ್‌ಶೋರ್ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಯೋಜನೆ ಇದಾಗಿದೆ. ಈ ಮೂಲಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಸಂಶೋಧನಾ ಪರಿಣತಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮಾನ್ಯತೆ ದೊರೆತಿದೆ.
ಯೋಜನೆಯಡಿ ಡಾ. ರಾಘವೇಂದ್ರ ಬೋನಾಳ ಅವರು ಡಿಜಿಟಲ್ ಗ್ರಂಥಾಲಯ ವ್ಯವಸ್ಥೆಗಳು, ಕೃತಕ ಬುದ್ಧಿಮತ್ತೆ (AI) ಆಧಾರಿತ ಗ್ರಂಥಾಲಯ ಸ್ವಯಂಚಾಲನೆ, ಜ್ಞಾನ ನಿರ್ವಹಣಾ ವ್ಯವಸ್ಥೆಗಳು ಹಾಗೂ ಆಧುನಿಕ ಮಾಹಿತಿ ತಂತ್ರಜ್ಞಾನಗಳ ಬಳಕೆಗೆ ಸಂಬಂಧಿಸಿದ ತಾಂತ್ರಿಕ ಸಲಹೆಗಳನ್ನು ನೀಡಲಿದ್ದಾರೆ.
ಇದಲ್ಲದೆ, ಅವರು ಈಗಾಗಲೇ ಪೇಟೆಂಟ್ ಪಡೆದಿರುವ ಕೃತಕ ಬುದ್ಧಿಮತ್ತೆ ಆಧಾರಿತ ಸಂವಾದಾತ್ಮಕ ಸ್ಮಾರ್ಟ್ ಪುಸ್ತಕ ತಂತ್ರಜ್ಞಾನದ ಬಳಕೆಯ ಸಾಧ್ಯತೆಗಳ ಕುರಿತೂ ಈ ಯೋಜನೆಯಡಿ ಅಧ್ಯಯನ ನಡೆಸಲಿದ್ದಾರೆ.
ಡಿಜಿಟಲ್ ಗ್ರಂಥಾಲಯ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯದ ಸಂಶೋಧನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಈ ಸಾಧನೆಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಡಾ. ರಾಘವೇಂದ್ರ ಬೋನಾಳ ಅವರನ್ನು ಅಭಿನಂದಿಸಿದ್ದಾರೆ.






