ಕಲಬುರಗಿ | ಗುಲ್ಬರ್ಗಾ ವಿವಿಯ ನೂತನ ಕುಲಪತಿಯಾಗಿ ಡಾ.ಶಶಿಕಾಂತ ಉಡಿಕೇರಿ ನೇಮಕ

ಕಲಬುರಗಿ: ನಗರದ ಹೊರವಲಯದಲ್ಲಿರುವ ಗುಲ್ಬರ್ಗಾ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಶಶಿಕಾಂತ ಎಸ್.ಉಡಿಕೇರಿ ಅವರನ್ನು ನೇಮಕ ಮಾಡಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಬರೋಬ್ಬರಿ 8 ತಿಂಗಳ ಬಳಿಕ ವಿವಿಗೆ ಖಾಯಂ ಕುಲಪತಿಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನವರಾದ ಉಡಿಕೇರಿ ಗ್ರಾಮದವರಾದ ಡಾ.ಶಶಿಕಾಂತ ಅವರು ಕೆಲ ಕಾಲ ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾಗಿ ಕೆಲಸ ಮಾಡಿದ್ದರು.
ಈ ಹಿಂದೆ ಕುಲಪತಿಯಾಗಿದ್ದ ಪ್ರೊ.ದಯಾನಂದ ಅಗಸರ ಅವರ ಅಧಿಕಾರವಧಿ ಜನವರಿಯಲ್ಲಿ ಮುಗಿದಿತ್ತು. ಇದಾದ ಬಳಿಕ ವಿವಿಯ ಪ್ರಭಾರ ಕುಲಪತಿಯಾಗಿ ಪ್ರೊ.ಗೂರು ಶ್ರೀರಾಮುಲು, ಪ್ರೊ.ಹೂವಿನಬಾವಿ ಬಾಬಣ್ಣ, ಪ್ರೊ.ಅಬ್ದುಲ್ ರಬ್ ಉಸ್ತಾದ್ ಅವರು ನಿಭಾಯಿಸಿದ್ದರು.
ಇದೀಗ ಹಲವು ತಿಂಗಳ ಬಳಿಕ ಖಾಯಂ ಕುಲಪತಿಗಳಾಗಿ ನೇಮಕವಾಗಿರುವ ಡಾ.ಶಶಿಕಾಂತ ಉಡಿಕೇರಿ ಅವರ ಅಧಿಕಾರವಧಿ ಮುಂದಿನ ನಾಲ್ಕು ವರ್ಷಗಳ ಕಾಲ ಇರಲಿದೆ.





