Kalaburagi | ಗುಲ್ಬರ್ಗಾ ಉತ್ತರ, ದಕ್ಷಿಣ ಕರಡು ಮತದಾರರ ಪಟ್ಟಿ ಪ್ರಕಟ: ಸೆ.23ರ ವರೆಗೆ ಆಕ್ಷೇಪಣೆಗೆ ಅವಕಾಶ

ಕಲಬುರಗಿ: ಕಲಬುರಗಿ ಉತ್ತರ–45 ವಿಧಾನಸಭಾ ಕ್ಷೇತ್ರದ ಎಸ್‌ಐಆರ್ ಪ್ರಕ್ರಿಯೆಯ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವ ಅರ್ಹ ಮತದಾರರಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಅವಕಾಶ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ತಿಳಿಸಿದರು.
ನಗರದ ಮಹಾನಗರ ಪಾಲಿಕೆ ಟೌನ್‌ಹಾಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಉತ್ತರ ಕ್ಷೇತ್ರದಲ್ಲಿ 1,14,271 ಪುರುಷರು, 1,15,685 ಮಹಿಳೆಯರು ಹಾಗೂ 41 ಇತರೆ ಮತದಾರರು ಸೇರಿದಂತೆ ಒಟ್ಟು 2,29,997 ಮತದಾರರಿದ್ದಾರೆ ಎಂದು ಹೇಳಿದರು.
ಎಸ್‌ಐಆರ್ ಪ್ರಕ್ರಿಯೆಗೂ ಮುನ್ನ ಕ್ಷೇತ್ರದಲ್ಲಿ ಒಟ್ಟು 3,35,254 ಮತದಾರರಿದ್ದರು. ಈ ಪೈಕಿ 8,048 ಮಂದಿ ಮೃತಪಟ್ಟವರು, 17,833 ಮಂದಿ ಗೈರುಹಾಜರು, 64,866 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 5,179 ಮಂದಿ ಈಗಾಗಲೇ ನೋಂದಣಿಯಾಗಿರುವವರು ಹಾಗೂ 9,331 ಮಂದಿ ಇತರೆ ವ್ಯತ್ಯಾಸಗಳ ವರ್ಗದಲ್ಲಿ ಗುರುತಿಸಲ್ಪಟ್ಟಿದ್ದು, ಒಟ್ಟು 1,05,257 ಮತದಾರರು ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಮಾಹಿತಿ ನೀಡಿದರು.
ಇದಲ್ಲದೆ, ಕರಡು ಪಟ್ಟಿಯಲ್ಲಿ 9,597 ಅಸಂಗತತೆ ಹಾಗೂ 16,261 ನೋ-ಮ್ಯಾಪಿಂಗ್ ಪ್ರಕರಣಗಳು ಪತ್ತೆಯಾಗಿವೆ. ಇಂತಹ ಮತದಾರರಿಗೆ ಬಿಎಲ್‌ಒಗಳ ಮೂಲಕ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿಯೇ ವಿಚಾರಣೆ ನಡೆಸಲು ಹೆಚ್ಚುವರಿಯಾಗಿ 14 ಎಇಆರ್‌ಒಗಳನ್ನು ನಿಯೋಜಿಸಲು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.
ನೋಟಿಸ್ ಹಾಗೂ ಹಕ್ಕು–ಆಕ್ಷೇಪಣೆಗಳ ವಿಚಾರಣೆ ಪ್ರಕ್ರಿಯೆಯನ್ನು ಅಕ್ಟೋಬರ್ 22ರೊಳಗೆ ಪೂರ್ಣಗೊಳಿಸಿ, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವಿನಾಶ ಶಿಂಧೆ ಹೇಳಿದರು.
ದಕ್ಷಿಣ ಕ್ಷೇತ್ರದಲ್ಲಿ 1.96 ಲಕ್ಷ ಮತದಾರರು :
ಮಹಾನಗರ ಪಾಲಿಕೆ ಉಪ ಆಯುಕ್ತೆ ಪ್ರಮೀಳಾ ಮಾತನಾಡಿ, ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಸ್‌ಐಆರ್ ಕರಡು ಪಟ್ಟಿಯಲ್ಲಿ 96,481 ಪುರುಷರು, 1,00,008 ಮಹಿಳೆಯರು ಹಾಗೂ 33 ಇತರೆ ಮತದಾರರು ಸೇರಿದಂತೆ ಒಟ್ಟು 1,96,522 ಮತದಾರರಿದ್ದಾರೆ. ಇವರಲ್ಲಿ 1,312 ಯುವ ಮತದಾರರು ಹಾಗೂ 1,702 ವಿಕಲಚೇತನ ಮತದಾರರಿದ್ದು, ಲಿಂಗಾನುಪಾತ 1,037 ಇದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ 12,648 ಅಸಂಗತತೆ ಹಾಗೂ 18,429 ನೋ-ಮ್ಯಾಪಿಂಗ್ ಪ್ರಕರಣಗಳು ಸೇರಿದಂತೆ ಸುಮಾರು 31 ಸಾವಿರ ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯಲಿದೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು 16 ಹೆಚ್ಚುವರಿ ಎಇಆರ್‌ಒಗಳನ್ನು ನೇಮಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಮತಗಟ್ಟೆ ಹಂತದಲ್ಲಿ 5ರಿಂದ 6 ಕೇಂದ್ರಗಳನ್ನು ವಿಲೀನಗೊಳಿಸಿ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಅರ್ಹ ಮತದಾರರಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶವಿದ್ದು, ಪಟ್ಟಿಯಲ್ಲಿ ಹೆಸರು ಇಲ್ಲದವರು ಸೇರ್ಪಡೆಗಾಗಿ ನಮೂನೆ–6 ಹಾಗೂ ತಿದ್ದುಪಡಿಗಾಗಿ ನಮೂನೆ–8ರ ಮೂಲಕ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.






