ಕಲಬುರಗಿ | ಜೀವನದಲ್ಲಿ ಕನಸು, ಗುರಿ ಮುಖ್ಯ : ಡಾ.ಶರಣಪ್ಪ ಎಸ್.

ಕಲಬುರಗಿ : ಜೀವನದಲ್ಲಿ ನಾವು ಅಂದುಕೊಂಡದ್ದನ್ನು ಸಾಧಿಸಲು ಕನಸು ಮತ್ತು ಗುರಿ ಮುಖ್ಯವಾಗಿದೆ ಅವನ್ನು ಸಾಧಿಸಲು ಕಠಿಣ ಪರಿಶ್ರಮದ ಅವಶ್ಯಕತೆಯಿದೆ ಎಂದು ಕಲಬುರಗಿ ನಗರ ಪೋಲಿಸ್ ಆಯುಕ್ತ ಡಾ.ಶರಣಪ್ಪ ಎಸ್.ಢಗೆ ಅಭಿಪ್ರಾಯಪಟ್ಟರು.
ಆಳಂದ ಪಟ್ಟಣದ ಎಸ್ಆರ್ಜಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಕಾಲದಲ್ಲಿ ಶಿಕ್ಷಣ ಕಲಿಸುವ, ಕಲಿಯುವ ವಿಧಾನ ಬದಲಾಗಿದೆ. ಆಧುನಿಕ ಬೋಧನಾ ವಿಧಾನಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸಿವೆ ಈ ವಿಧಾನದಲ್ಲಿ ಶಿಕ್ಷಕರ ಮತ್ತು ಪಾಲಕರ ಮಹತ್ವ ಹೆಚ್ಚಾಗಿದೆ ಆದ್ದರಿಂದ ಎಲ್ಲರೂ ಜವಾಬ್ದಾರಿಯಿಂದ ನಮ್ಮ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದರು.
ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೂರ್ಯಕಾಂತ ಮದಾನೆ ಮಾತನಾಡಿ, ಶಿಕ್ಷಣ ವ್ಯವಸ್ಥೆಯ ಸಮಗ್ರ ಸುಧಾರಣೆಗಾಗಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸಮುದಾಯವು ನಿರಂತರವಾಗಿ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಹರ್ಷಾ ಗುತ್ತೇದಾರ ಮಾತನಾಡಿ, ಜೀವನದಲ್ಲಿ ಕನಸು ಮತ್ತು ಗುರಿ ಬಹಳ ಮುಖ್ಯ. ಅತಿ ಆಸೆಯಿಂದ ಮಾನವೀಯ ಸಂಬಂಧಗಳು ದೂರವಾಗುತ್ತಿವೆ. ಹೀಗಾಗಿ ಹೃದಯ ಶ್ರೀಮಂತಿಕೆಯಿಂದ ಮಾತ್ರ ಶಾಂತಿ ಸಾಮರಸ್ಯ ಮೂಡಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಧರ್ಮ ಸಂಸ್ಕೃತಿ ಮತ್ತು ಆದರ್ಶ ಉಳಿಸಿ ಬೆಳೆಸುವ ಅಗತ್ಯವಿದೆ. ಸತ್ಯ ಸಾಧಿಸಲು ಹೊರಟವರಿಗೆ ಸಂಕಷ್ಟ ತಪ್ಪಿದ್ದಲ್ಲ. ಜನರ ನಿಂದನೆಗಳು ಇದ್ದೆ ಇರುತ್ತವೆ. ಅವುಗಳನ್ನು ಲೆಕ್ಕಿಸದೇ ಗಟ್ಟಿತನದಿಂದ ನಡೆದಾಗ ಗುರಿ ಮುಟ್ಟಲು ಸಾಧ್ಯ. ಕಣ್ಣಿಲ್ಲದವನು ಕುರುಡನಲ್ಲ. ದೋಷ ಮರೆಮಾಚುವವನು ನಿಜವಾದ ಕುರುಡ. ಅನುಭವದಿಂದ ಸಿಗುವ ಜ್ಞಾನ ಯಾವುದೇ ವಿಶ್ವವಿದ್ಯಾಲಯದಿಂದ ಪಡೆಯಲು ಸಾಧ್ಯವಿಲ್ಲ ಕ್ರೀಯಾಶೀಲ ವ್ಯಕ್ತಿಗಳು ಸಾಧಿಸುವ ಛಲನಿಷ್ಠೆ ಹೊಂದಿರುತ್ತಾರೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ.ರಾಘವೇಂದ್ರ ಚಿಂಚನಸೂರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಚಾರ್ಯೆ ಜ್ಯೋತಿ ವಿಶಾಖ್ ವಾರ್ಷಿಕ ವರದಿ ಮಂಡಿಸಿದರು.
ಸಹ ಶಿಕ್ಷಕ ಆನಂದ ಸ್ವಾಗತಿಸಿದರೆ, ವಿದ್ಯಾರ್ಥಿನಿಯರಾದ ಸೇವಂತಾ, ತನ್ವಿ ನಿರೂಪಿಸಿದರು. ಸಹ ಶಿಕ್ಷಕಿ ಪ್ರಿಯಾಂಕಾ ವಂದಿಸಿದರು.
ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ನೃತ್ಯ, ರೂಪಕಗಳನ್ನು ಪ್ರದರ್ಶಿಸಿದರು. ಶಾಲೆಯ ಸುಮಾರು 300 ವಿದ್ಯಾರ್ಥಿಗಳು ಬೆಳಕಿನ ಕಿರಣ ಹಾಗೂ ವಿವಿಧ ಸನ್ನಿವೇಶಗಳನ್ನು, ವಿಭಿನ್ನ ಶೈಲಿಗಳನ್ನು ಬಳಸಿ ಸೃಷ್ಟಿಸಿ ಪ್ರಸ್ತುತಪಡಿಸಿದ ರಾಮಾಯಣ ದರ್ಶನ ನೋಡುಗರ ಮನಸೆಳೆಯಿತು.







