Kalaburagi | ಚಿತ್ರಕಲಾ ಕ್ಷೇತ್ರಕ್ಕೆ ಡಾ. ಜೆ.ಎಸ್.ಖಂಡೇರಾವ ಅವರ ಕೊಡುಗೆ ಅಮೂಲ್ಯ: ಸಂಸದ ರಾಧಾಕೃಷ್ಣ ದೊಡ್ಡಮನಿ
‘ಅಮೂರ್ತ ಧ್ಯಾನ’ ಗ್ರಂಥ ಬಿಡುಗಡೆ

ಕಲಬುರಗಿ: ನಾಡೋಜ ಡಾ. ಜೆ.ಎಸ್. ಖಂಡೇರಾವ ಅವರು ಚಿತ್ರಕಲಾ ಕ್ಷೇತ್ರದಲ್ಲಿ ಸಾಗಿ ಬಂದ ಹಾದಿ ಅನುಪಮವಾದದ್ದು. ಕಲಬುರಗಿಯಲ್ಲಿ ಕಲಾಶಾಲೆ ಸ್ಥಾಪಿಸುವ ಮೂಲಕ ಈ ಭಾಗದ ಅನೇಕ ಪ್ರತಿಭಾವಂತ ಕಲಾವಿದರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಅವರು ಕಾರಣರಾಗಿದ್ದಾರೆ. ಚಿತ್ರಕಲಾ ಕ್ಷೇತ್ರಕ್ಕೆ ಅವರ ಕೊಡುಗೆ ಅಮೂಲ್ಯವಾದದ್ದು ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ ಹೇಳಿದರು.
ನಗರದ ಎಂಆರ್‌ಎಂಸಿ ಸ್ಯಾಕ್ ಸಭಾಂಗಣದಲ್ಲಿ ನಾಡೋಜ ಡಾ. ಜೆ.ಎಸ್. ಖಂಡೇರಾವ ಪ್ರತಿಷ್ಠಾನದ ವತಿಯಿಂದ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕಲಾವಿದ ಡಾ.ಅಶೋಕ ಶೆಟಕಾರ ರಚಿಸಿದ ‘ಅಮೂರ್ತ ಧ್ಯಾನ’ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಡಾ. ಜೆ.ಎಸ್. ಖಂಡೇರಾವ ಅವರ ಭಾವಚಿತ್ರಗಳು, ಭೂದೃಶ್ಯ ಚಿತ್ರಗಳು ಹಾಗೂ ಅಮೂರ್ತ ಶೈಲಿಯ ಕಲಾಕೃತಿಗಳು ವಿಶಿಷ್ಟ ಕಲಾಭಿವ್ಯಕ್ತಿಯಿಂದ ಗಮನ ಸೆಳೆದಿವೆ. ‘ಅಮೂರ್ತ ಧ್ಯಾನ’ ಗ್ರಂಥವು ಖಂಡೇರಾವ ಅವರ ಬದುಕು, ಸಾಧನೆ ಹಾಗೂ ಕಲಾ ಪಯಣವನ್ನು ಅನಾವರಣಗೊಳಿಸುವ ಮಹತ್ವದ ಕೃತಿಯಾಗಿದೆ ಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಚಿತ್ರಕಲಾವಿದ ಡಾ. ಎಂ.ಎಸ್. ಮೂರ್ತಿ, ಕಲಾ ಪರಂಪರೆಯ ಸಂರಕ್ಷಣೆ ಮತ್ತು ಬೆಳವಣಿಗೆ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಡಾ. ಜೆ.ಎಸ್. ಖಂಡೇರಾವ ಅವರ ಕೊಡುಗೆ ಮಾದರಿಯಾಗಿದೆ. ಅವರ ವ್ಯಕ್ತಿತ್ವ, ಕಲಾಸಾಧನೆ ಹಾಗೂ ಕಲಾಕೃತಿಗಳು ಇಂದಿನ ಯುವ ಕಲಾವಿದರಿಗೆ ಪ್ರೇರಣೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿತ್ರಕಲಾವಿದ ಡಾ. ಸಿ. ಚಂದ್ರಶೇಖರ ಮಾತನಾಡಿ, ಇಂತಹ ಕಾರ್ಯಕ್ರಮಗಳು ಕಲಾಕ್ಷೇತ್ರದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹಿರಿಯ ಕಲಾವಿದರ ಸಾಧನೆ ಹಾಗೂ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಕಲಾಕ್ಷೇತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಲು ಸಾಧ್ಯವಾಗುತ್ತದೆ ಎಂದರು.
ಗ್ರಂಥದ ಲೇಖಕ ಹಾಗೂ ಕಲಾವಿದ ಡಾ. ಅಶೋಕ ಶೆಟಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಂಥದ ಕುರಿತು ಪ್ರೊ. ವಿಕ್ರಮಸಾಜಿ ಮಾತನಾಡಿದರು. ಬಸವರಾಜ ಪಾಟೀಲ ಸೇಡಂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ನಾಡೋಜ ಡಾ. ಜೆ.ಎಸ್. ಖಂಡೇರಾವ, ಡಾ. ಪಿ.ಎಸ್. ಶಂಕರ ಹಾಗೂ ಡಾ. ಪ್ರಭುರಾಜ ಕಾಂತಾ ಉಪಸ್ಥಿತರಿದ್ದರು. ಪೂಜ್ಯ ಜಡೆ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಭಾಲ್ಕಿ ಹಿರೇಮಠ ಸಂಸ್ಥಾನದ ಕಿರಿಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ನಾಡೋಜ ಡಾ. ಜೆ.ಎಸ್. ಖಂಡೇರಾವ ಅವರ ಕಲಾಕೃತಿಗಳ ಪ್ರದರ್ಶನ ಆಯೋಜಿಸಲಾಗಿತ್ತು. ಅನುಭವ ಮಂಟಪ, ಮಹಾತ್ಮ ಗಾಂಧೀಜಿ ಹಾಗೂ ಡಾ. ಎಸ್.ಎಂ. ಪಂಡಿತ ಸೇರಿದಂತೆ ವಿವಿಧ ವಿಷಯಗಳ ಕುರಿತಾದ ಅವರ ಕಲಾಕೃತಿಗಳು ವೀಕ್ಷಕರ ಗಮನ ಸೆಳೆದವು.
ಅವರ ಭೂದೃಶ್ಯ ಚಿತ್ರಗಳು, ಅಮೂರ್ತ ಚಿತ್ರಗಳು ಹಾಗೂ ಜನಪದ ಶೈಲಿಯ ಕಲಾಕೃತಿಗಳು ಕಲಾಪ್ರಿಯರನ್ನು ಆಕರ್ಷಿಸಿದವು. ಪ್ರದರ್ಶನವು ಖಂಡೇರಾವ ಅವರ ವೈವಿಧ್ಯಮಯ ಕಲಾಭಿವ್ಯಕ್ತಿ ಮತ್ತು ಸೃಜನಶೀಲತೆಯನ್ನು ಪರಿಚಯಿಸಿತು.
ಪ್ರತಿಷ್ಠಾನದ ಕಾರ್ಯದರ್ಶಿ ಬಸವರಾಜ ಖಂಡೇರಾವ ಸ್ವಾಗತಿಸಿದರು. ಲಕ್ಷ್ಮೀಕಾಂತ ಪಾಟೀಲ ಹಾಗೂ ಶಾಂತಾ ಭೀಮಸೇನರಾವ ಕಾರ್ಯಕ್ರಮ ನಿರೂಪಿಸಿದರು. ಸೃಷ್ಟಿ ಬಿ. ಖಂಡೇರಾವ ವಂದಿಸಿದರು.
ಲಲಿತಕಲಾ ಅಕಾಡೆಮಿ ಸದಸ್ಯ ಬಸವರಾಜ ಜಾನೆ ಸೇರಿದಂತೆ ಖಂಡೇರಾವ ಅವರ ಕುಟುಂಬದ ಸದಸ್ಯರು, ಹಿರಿಯ ಮತ್ತು ಕಿರಿಯ ಕಲಾವಿದರು, ಸಾಹಿತಿಗಳು, ಶಿಲ್ಪಿಗಳು, ವಾಸ್ತುಶಿಲ್ಪಿಗಳು, ಶಿಷ್ಯವೃಂದ ಹಾಗೂ ಅಪಾರ ಅಭಿಮಾನಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.






