ಕಲಬುರಗಿ | ಡಾ.ಶರಣಬಸವಪ್ಪ ಅಪ್ಪಾ ಅವರಿಗೆ ʼಜ್ಞಾನ ದಾಸೋಹ ರತ್ನʼ ಪ್ರಶಸ್ತಿ ಪ್ರದಾನ

ಕಲಬುರಗಿ: ಬುಧವಾರ ಸಾಯಂಕಾಲ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪಾಜಿ ಅವರಿಗೆ, ಹಾಸನ ಮೂಲದ ಶಾನಭೋಗ ಶ್ರೀ ದಾಸಪ್ಪ ದತ್ತಿ ಇವರ ಆಶ್ರಯದಲ್ಲಿ ಬೆಳ್ಳಿ ಕಿರೀಟ ನೀಡಿ ಜ್ಞಾನ ದಾಸೋಹ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.
ನಗರದ ಶರಣಬಸವೇಶ್ವರ ಪುಣ್ಯಕ್ಷೇತ್ರದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಶಾನಭೋಗ ದಾಸಪ್ಪ ದತ್ತಿ ಸಂಚಾಲಕ ಕೆ.ಪಿ ವೆಂಕಟೇಶ ಮೂರ್ತಿಯವರು ಡಾ.ಅಪ್ಪಾಜಿಯವರಿಗೆ ಬೆಳ್ಳಿ ಕಿರೀಟ ಧಾರಣ ಹಾಗೂ ಜ್ಞಾನ ದಾಸೋಹ ರತ್ನ ಪ್ರಶಸ್ತಿ ಪ್ರದಾನ ಮಾಡಿದರು. ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ.ದಾಕ್ಷಾಯಿಣಿ ಅವ್ವಾ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಸೇರಿದಂತೆ ಇತರ ಗಣ್ಯರು ವೇದಿಕೆ ಮೇಲಿದ್ದರು.
ಪ್ರಶಸ್ತಿ ಪ್ರದಾನ ಮಾಡಿದ ವೆಂಕಟೇಶ ಮೂರ್ತಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಡಾ.ಅಪ್ಪಾ ಅವರ ಅಪಾರ ಕೊಡುಗೆಯನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ದಾಸಪ್ಪ ದತ್ತಿಯವರು ಕಳೆದ ಹಲವಾರು ವರ್ಷಗಳಿಂದ, ಗಣ್ಯರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಗೌರವಿಸುವ ಗುರುತಾಗಿ ಜಾತಿ-ಮತದ ಭೇದವಿಲ್ಲದೆ ಶ್ರೇಷ್ಠ ವ್ಯಕ್ತಿಗಳಿಗೆ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಎಂ.ಹಿರೇಮಠ ಈ ಸಂದರ್ಭದಲ್ಲಿ ಮಾತನಾಡಿದರು.
ಬಸವರಾಜ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಡಾ. ಉಮಾದೇವಿ ದೇಶಮುಖ ಸ್ವಾಗತಿಸಿದ್ದರು.







