Kalaburagi | ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ: ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಕಲಬುರಗಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ʼಶುದ್ಧೀಕರಿಸಿʼ ಹೋಮ-ಹವನ ನಡೆಸಿದ ಘಟನೆ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಜಗತ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ರ್ಯಾಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು. ಈ ವೇಳೆ ಪ್ರತಿಭಟನಾಕಾರರು ಜಾತಿ ಆಧಾರಿತ ಅಸ್ಪೃಶ್ಯತೆ ಆಚರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಅಸ್ಪೃಶ್ಯತೆ ಆಚರಿಸಿದ ಸಂಘಟನೆಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ, ಇತ್ತೀಚೆಗೆ ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದರು. ಬಳಿಕ ಕೆಲ ಕೋಮುವಾದಿ ಸಂಘಟನೆಗಳು ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿ ಹೋಮ-ಹವನ ನಡೆಸಿರುವುದು ಜಾತಿ ಆಧಾರಿತ ಅಸ್ಪೃಶ್ಯತೆಯ ಆಚರಣೆಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
“ಸಂವಿಧಾನ ಜಾರಿಗೆ ಬಂದು 77 ವರ್ಷಗಳು ಕಳೆದರೂ ದೇಶದಲ್ಲಿ ಅಸ್ಪೃಶ್ಯತೆ ಜೀವಂತವಾಗಿರುವುದು ವಿಷಾದನೀಯ. ಜಾತಿಯ ಆಧಾರದಲ್ಲಿ ನಡೆಯುವ ಇಂತಹ ಅಮಾನವೀಯ ಆಚರಣೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ ವ್ಯವಸ್ಥೆಯಲ್ಲಿ ವಂಚಿತ ಸಮುದಾಯದಿಂದ ಬಂದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ತ್ಯಾಗ, ಹೋರಾಟ ಹಾಗೂ ಪ್ರಾಮಾಣಿಕತೆಯಿಂದ ರಾಷ್ಟ್ರದ ಪ್ರಮುಖ ನಾಯಕರಾಗಿ ಬೆಳೆದಿದ್ದಾರೆ. ಅಂತಹ ನಾಯಕನ ಮನೋಸ್ಥೈರ್ಯ ಕುಗ್ಗಿಸುವ ಉದ್ದೇಶದಿಂದ ನಡೆದಿರುವ ಕೃತ್ಯವನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಇದು ಕೇವಲ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಿದ ಅವಮಾನವಲ್ಲ. ದೇಶದ ಶೋಷಿತ ಸಮುದಾಯಕ್ಕೆ ಹಾಗೂ ಸಂವಿಧಾನ ಮತ್ತು ಕಾನೂನು ವ್ಯವಸ್ಥೆಗೆ ಮಾಡಿದ ಅಪಮಾನವಾಗಿದೆ. ಇಂತಹ ಜಾತಿವಾದಿ ಹಾಗೂ ಸಂವಿಧಾನ ವಿರೋಧಿ ಆಚರಣೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿ ಹೋಮ-ಹವನ ನಡೆಸಿದವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ, 1989 ಹಾಗೂ ಅಸ್ಪೃಶ್ಯತೆ ಆಚರಣೆ ವಿರೋಧಿ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಡಿ.ಜಿ. ಸಾಗರ ಆಗ್ರಹಿಸಿದರು.
“ಸಂವಿಧಾನ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿದೆ. ದೇಶದ ಆಡಳಿತ ಮತ್ತು ಸಮಾಜ ಸಂವಿಧಾನದ ಆಶಯಗಳ ಆಧಾರದ ಮೇಲೆ ನಡೆಯಬೇಕಾಗಿದೆ. ಆದರೆ ಇಂತಹ ಘಟನೆಗಳು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತಿವೆ. ಮನುವಾದಿ ಹಾಗೂ ಜಾತಿವಾದಿ ಮನೋಭಾವಗಳಿಗೆ ಕಡಿವಾಣ ಹಾಕುವುದು ಅಗತ್ಯ” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಖಜಾಂಚಿ ಬಿ.ಸಿ. ವಾಲಿ, ಜಿಲ್ಲಾ ಮುಖಂಡರಾದ ಸುರೇಶ್ ಹಾದಿಮನಿ, ಎಸ್.ಪಿ. ಸುಳ್ಳದ, ರೇವಣಸಿದ್ದ ಜಾಲಿ, ಎಚ್. ಶಂಕರ, ಪ್ರಕಾಶ್ ಮೂಲಭಾರತಿ ಸೇರಿದಂತೆ ಹಲವರು ಭಾಗವಹಿಸಿದ್ದರು.






