Kalaburagi | ಲೋಕಾಯುಕ್ತ ದಾಳಿಯ ವೇಳೆ ನಿವೃತ್ತ ಎಂಜಿನಿಯರ್ ಲಾಕರ್‌ನಲ್ಲಿ 9 ಲಕ್ಷ ರೂ. ಹಳೆಯ ನೋಟು, 20 ತೊಲೆಗೂ ಹೆಚ್ಚು ಬಂಗಾರ ಪತ್ತೆ

ಕಲಬುರಗಿ : ನಿವೃತ್ತ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಎಂಜಿನಿಯರ್ ಮಾಣಿಕ್ ಕನಕಟ್ಟಿ ಅವರಿಗೆ ಸೇರಿದ ಬ್ಯಾಂಕ್ ಲಾಕರ್‌ನಲ್ಲಿ ಸುಮಾರು 9 ಲಕ್ಷ ರೂ. ಮೌಲ್ಯದ ಅಮಾನ್ಯೀಕೃತ 1,000 ರೂ. ಮುಖಬೆಲೆಯ ಹಳೆಯ ನೋಟುಗಳು ಹಾಗೂ 20 ತೊಲೆಗೂ ಅಧಿಕ ಬಂಗಾರದ ಆಭರಣಗಳು ಪತ್ತೆಯಾಗಿರುವುದು ಲೋಕಾಯುಕ್ತ ದಾಳಿಯ ವೇಳೆ ಬೆಳಕಿಗೆ ಬಂದಿದೆ.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ಮಂಗಳವಾರ ಗೊದುತಾಯಿ ನಗರದಲ್ಲಿರುವ ನಿವಾಸ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು, ಬುಧವಾರ ನಗರದ ಎನ್.ವಿ. ಕಾಲೇಜು ಸಮೀಪದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿರುವ ಲಾಕರ್‌ನ್ನು ತಪಾಸಣೆ ನಡೆಸಿದರು.
ತಪಾಸಣೆ ವೇಳೆ ನೋಟು ಅಮಾನ್ಯೀಕರಣದ ಬಳಿಕ ಚಲಾವಣೆಯಿಂದ ಹೊರಗುಳಿದ 1,000 ರೂ. ಮುಖಬೆಲೆಯ ನೂರಾರು ಹಳೆಯ ನೋಟುಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 9 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇದರ ಜೊತೆಗೆ ಬಂಗಾರದ ಉಂಗುರಗಳು ಸೇರಿದಂತೆ ವಿವಿಧ ಬಗೆಯ ಚಿನ್ನದ ಆಭರಣಗಳು ಪತ್ತೆಯಾಗಿದ್ದು, ಸುಮಾರು 20 ತೊಲೆಗೂ ಅಧಿಕ ಬಂಗಾರವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಬಸವರಾಜ್, ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ರಾಜಶೇಖರ ಬಡದೇಸಾರ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.






