Kalaburagi | ಸಂಶೋಧನಾ ಮೂಲಸೌಕರ್ಯ ಬಳಸಿಕೊಂಡು ಕೌಶಲ್ಯ ವೃದ್ಧಿಸಿಕೊಳ್ಳಿ : ಪ್ರೊ.ಬಟ್ಟು ಸತ್ಯನಾರಾಯಣ

ಕಲಬುರಗಿ : ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನದ ಜೊತೆಗೆ ಪ್ರಾಯೋಗಿಕ ಕೌಶಲ್ಯವೂ ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿರುವ ಅತ್ಯಾಧುನಿಕ ಸಂಶೋಧನಾ ಮೂಲಸೌಕರ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ಸಂಶೋಧನಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗ ಆಯೋಜಿಸಿದ್ದ “Mass Spectrometry-Based Proteomics” ವಿಷಯದ ಎರಡು ದಿನಗಳ ಕಾರ್ಯಾಗಾರ ಹಾಗೂ ರಾಷ್ಟ್ರೀಯ ಸೆಮಿನಾರ್ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಕಸಿತ ಭಾರತ–2047’ ನಿರ್ಮಾಣದ ರಾಷ್ಟ್ರೀಯ ಗುರಿ ಸಾಧನೆಯಲ್ಲಿ ಯುವ ಸಂಶೋಧಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದ ಅವರು, ನೊಬೆಲ್ ಪ್ರಶಸ್ತಿ ವಿಜೇತ ಡಾ. ಸಿ.ವಿ. ರಾಮನ್ ಅವರನ್ನು ಉದಾಹರಿಸಿ, ಸೀಮಿತ ಸಂಪನ್ಮೂಲಗಳ ನಡುವೆಯೂ ವಿಶ್ವಮಟ್ಟದ ಸಂಶೋಧನೆ ನಡೆಸಲು ಸಾಧ್ಯವಾಗಿತ್ತು. ಇಂದಿನ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ಸಂಶೋಧನಾ ಸೌಲಭ್ಯಗಳು ಲಭ್ಯವಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೊಸ ಆವಿಷ್ಕಾರಗಳಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು, ಪರಿಶ್ರಮ ಹಾಗೂ ನಿರಂತರ ಕಲಿಕೆಯನ್ನು ಜೀವನದ ಭಾಗವಾಗಿಸಿಕೊಳ್ಳಬೇಕು. ವಿಶ್ವವಿದ್ಯಾಲಯದಲ್ಲಿ ಶೀಘ್ರದಲ್ಲೇ ಉದ್ಯೋಗ ಕೌಶಲ್ಯ ವೃದ್ಧಿಗೆ ನೆರವಾಗುವ OEET ತರಬೇತಿ ತರಗತಿಗಳನ್ನು ಆರಂಭಿಸುವ ಯೋಜನೆಯಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಹೈದರಾಬಾದ್‌ನ ಥರ್ಮೋ ಫಿಶರ್ ಸೈಂಟಿಫಿಕ್‌ನ ವಿಜ್ಞಾನಿ ಬಾಲಭಾವು ವಾರ್ಕಾಡ್, ಬೆಂಗಳೂರಿನ ಜೆಎನ್‌ಸಿಎಎಸ್‌ಆರ್‌ನ ಪ್ರೊ. ಹೇಮಲತಾ ಬಲರಾಮ್ ಹಾಗೂ ಪುಣೆಯ ಸಿಎಸ್‌ಐಆರ್–ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿಯ ಪ್ರೊ. ಮಹೇಶ್ ಜೆ. ಕುಲಕರ್ಣಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಾಸ್ ಸ್ಪೆಕ್ಟ್ರೋಮೆಟ್ರಿ, ಪ್ರೋಟಿಯೋಮಿಕ್ಸ್, ಡೇಟಾ ಸಂಗ್ರಹಣೆ, ವಿಶ್ಲೇಷಣೆ ಹಾಗೂ ಸಂಶೋಧನಾ ತಂತ್ರಜ್ಞಾನಗಳ ಕುರಿತು ಸಂಶೋಧನಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಪ್ರಾಯೋಗಿಕ ತರಬೇತಿ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಮಾತನಾಡಿ, ಇಂತಹ ಕಾರ್ಯಾಗಾರಗಳು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಅತ್ಯಂತ ಉಪಯುಕ್ತವಾಗಿದ್ದು, ಅವುಗಳ ಮೂಲಕ ಸಂಶೋಧನೆಯ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ರಾಸಾಯನಿಕ ವಿಜ್ಞಾನ ವಿಭಾಗದ ಡೀನ್ ಪ್ರೊ. ವೆಂಕಟರಮಣ ದೊಡ್ಡಿ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಎಸ್‌ಐಸಿ ನಿರ್ದೇಶಕ ಪ್ರೊ. ಪಲ್ಲೆಪೋಗು ರಾಘವಯ್ಯ, ಸಂಘಟನಾ ಕಾರ್ಯದರ್ಶಿ ಪ್ರೊ. ಕೆ. ಹನುಮೇಗೌಡ, ಎಚ್‌ಆರ್‌ಎಂಎಸ್ ಸಂಯೋಜಕ ಡಾ. ಹರೀಶ್ ಹೊಳ್ಳ, ಪ್ರೊ. ಶೇಶಾಂತ ವಿಶ್ವನಾಥ ಭೋಸಲೆ, ಡಾ. ಎನ್.ಎಸ್. ವೆಂಕಟ ನಾರಾಯಣ, ಡಾ. ಓರುಗಂಟಿ ಆಂಜನೇಯುಲು, ಡಾ. ಪಿ. ದುರೈಪಾಂಡಿ, ಡಾ. ಅಶೋಕ್ ಪಬ್ಬತ್ತಿ ಸೇರಿದಂತೆ ರಸಾಯನಶಾಸ್ತ್ರ ಹಾಗೂ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.






