Kalaburagi | ಬೆಳೆ ಸಾಲ ಪಡೆದ ರೈತರಿಗೆ ಶೇ.100ರಷ್ಟು ಬೆಳೆ ವಿಮೆ ನೋಂದಣಿ ಮಾಡಿಸಿ: ಇಕ್ರಮ್ ಶರೀಫ್

ಕಲಬುರಗಿ : ಪ್ರಸಕ್ತ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆದಿರುವ ಜಿಲ್ಲೆಯ ಎಲ್ಲಾ ರೈತರನ್ನು ಕಡ್ಡಾಯವಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ಬೆಳೆ ವಿಮೆ) ಯೋಜನೆ ಅಡಿಯಲ್ಲಿ ನೋಂದಾಯಿಸುವಂತೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಬ್ಯಾಂಕರ್‌ಗಳು ಹಾಗೂ ಪ್ಯಾಕ್ಸ್ ಸಂಸ್ಥೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಕೃತ, ಖಾಸಗಿ, ಡಿಸಿಸಿ ಬ್ಯಾಂಕ್ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 1.93 ಲಕ್ಷ ರೈತರು ಬೆಳೆ ಸಾಲ ಪಡೆದಿದ್ದರೂ, ಇದುವರೆಗೆ ಕೇವಲ 9,980 ರೈತರು ಮಾತ್ರ ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿರುವುದು ತೀವ್ರ ಅಸಮಾಧಾನಕರ ಎಂದು ಹೇಳಿದರು.
ಪ್ರತಿ ಬ್ಯಾಂಕ್‌ಗೆ ನಿಗದಿಪಡಿಸಿರುವ ಗುರಿಯಂತೆ ಮುಂದಿನ ಒಂದು ವಾರದೊಳಗೆ ರೈತರ ಬೆಳೆ ವಿಮೆ ನೋಂದಣಿ ಪೂರ್ಣಗೊಳಿಸಬೇಕು. ಯಾವುದೇ ಅರ್ಹ ರೈತರು ವಿಮೆ ಯೋಜನೆಯಿಂದ ವಂಚಿತರಾಗದಂತೆ ಬ್ಯಾಂಕ್‌ಗಳು, ಪ್ಯಾಕ್ಸ್ ಸಂಸ್ಥೆಗಳು ಹಾಗೂ ಕೃಷಿ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 1.93 ಲಕ್ಷ ರೈತರಿಗೆ 3,260 ಕೋಟಿ ರೂ. ಬೆಳೆ ಸಾಲ ವಿತರಿಸಲಾಗಿದೆ. ಸಾಲ ಪಡೆದ ರೈತರು ಬೆಳೆ ವಿಮೆ ಮಾಡಿಸದೇ ಬೆಳೆ ಹಾನಿಗೊಳಗಾದರೆ, ವಿಮಾ ಕಂತನ್ನು ಸಂಬಂಧಿತ ಬ್ಯಾಂಕ್ ಅಥವಾ ಸಂಸ್ಥೆ ಪಾವತಿಸದಿದ್ದಲ್ಲಿ ಪರಿಹಾರ ಮೊತ್ತದ ಜವಾಬ್ದಾರಿಯೂ ಸಾಲ ನೀಡಿದ ಸಂಸ್ಥೆಯ ಮೇಲೇ ಇರುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ವಿವಿಧ ಬ್ಯಾಂಕ್‌ಗಳಿಗೆ ರೈತರ ನೋಂದಣಿ ಗುರಿ ನಿಗದಿಪಡಿಸಲಾಯಿತು. ಬ್ಯಾಂಕ್ ಆಫ್ ಬರೋಡಾಗೆ 850, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 1,000, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 12,000, ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ 37,000, ಡಿಸಿಸಿ ಬ್ಯಾಂಕ್‌ಗೆ 80,000 ಹಾಗೂ ಪ್ಯಾಕ್ಸ್ ಸಂಸ್ಥೆಗಳಿಗೆ 30,000 ರೈತರನ್ನು ಬೆಳೆ ವಿಮೆ ಯೋಜನೆಯಡಿ ನೋಂದಾಯಿಸುವ ಗುರಿ ನೀಡಲಾಗಿದೆ.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಯೋಜನೆಯ ಅನುಷ್ಠಾನ, ನೋಂದಣಿ ಪ್ರಕ್ರಿಯೆ, ಗಡುವು ಹಾಗೂ ರೈತರಿಗೆ ದೊರೆಯುವ ಪ್ರಯೋಜನಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಕಿಶೋರ, ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಅಂಬ್ರೀಶ್ ತೆಗನೂರ ಸೇರಿದಂತೆ ಜಿಲ್ಲೆಯ ವಿವಿಧ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್ಗಳ ಜಿಲ್ಲಾ ವ್ಯವಸ್ಥಾಪಕರು, ಪ್ಯಾಕ್ಸ್ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.






