ಕಲಬುರಗಿ | ಕೀಟ ಶಾಸ್ತ್ರಜ್ಞ ಚಾಮರಾಜ ದೊಡ್ಮನಿ ಅವರಿಗೆ 2025ರ ಕರ್ನಾಟಕ ಆರೋಗ್ಯ ಜ್ಯೋತಿ ಪ್ರಶಸ್ತಿ

ಕಲಬುರಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹಲವು ವರ್ಷಗಳಿಂದ ಕಿಟಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಚಾಮರಾಜ ದೊಡ್ಮನಿಯವರಿಗೆ ಅವರ ಅತ್ಯುನ್ನತ ಸೇವೆಯನ್ನು ಗುರುತಿಸಿ ಬೆಂಗಳೂರಿನ ರಾಘವಿ ಟ್ರಸ್ಟ್ ವತಿಯಿಂದ ಬೆಂಗಳೂರಿನ ಡಾ.ಅಂಬೇಡ್ಕರ್ ಭವನದಲ್ಲಿ 'ಆರೋಗ್ಯ ಜ್ಯೋತಿ ಅವಾರ್ಡ್ ಕರ್ನಾಟಕ-2025' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಚಾಮರಾಜ್ ದೊಡ್ಮನಿ ಅವರು ಕಳೆದ 20 ವರ್ಷಗಳಿಂದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಅಪರೂಪದ ಸೇವೆ, ಸಮರ್ಪಣೆ ಮತ್ತು ನವೀನ ಕಾರ್ಯಪದ್ದತಿಗಳ ಮೂಲಕ ರಾಜ್ಯದ ಆರೋಗ್ಯ ವ್ಯವಸ್ಥೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಇವರು ಕಳೆದ ಎರಡು ದಶಕಗಳಲ್ಲಿ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಫೈಲೇರಿಯಾ ಹಾಗೂ ಮಿದುಳು ಜ್ವರದಂತಹ ಅನೇಕ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಮತ್ತು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಲ್ಲಿ ರಾಜ್ಯ ಮಟ್ಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಇವರ ತಜ್ಞತೆ, ಜಾಗೃತಿ ಮೂಡಿಸುವ ಕೌಶಲ್ಯಗಳ ಮೂಲಕ ಇವರು ಇಲಾಖೆಗೆ ದೊಡ್ಡಶಕ್ತಿಯಾಗಿದ್ದಾರೆ. ಹಾಗಾಗಿ ಅವರ ಅನುಪಮ ಸೇವೆ ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ರಾಘವಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.







