Kalaburagi | ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕು: ಧರ್ಮಣ್ಣ ಧನ್ನಿ

ಕಲಬುರಗಿ: ಪರಿಸರದ ಆಗುಹೋಗುಗಳ ಬಗ್ಗೆ ಇಂದಿನ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ಮೂಲಕ ಪ್ರಕೃತಿ ಸಂರಕ್ಷಣೆಯ ಜವಾಬ್ದಾರಿಯನ್ನು ಅರಿವು ಮೂಡಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಧರ್ಮಣ್ಣ ಹೆಚ್. ಧನ್ನಿ ಕರೆ ನೀಡಿದರು.
ತಾಲೂಕಿನ ಕಡಗಂಚಿ ಗ್ರಾಮದ ವಿದ್ಯಾವರ್ಧಕ ಸಂಘ ಪ್ರೌಢಶಾಲೆಯಲ್ಲಿ ಸ್ಪೂರ್ತಿ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆ ಆಯೋಜಿಸಿದ್ದ ಸಸಿ ನೆಡುವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಆಧುನಿಕ ಜೀವನಶೈಲಿಯ ನಡುವೆಯೂ ಶಿಕ್ಷಣದ ಮೂಲಕ ಸಾಮಾಜಿಕ ಅರಿವು ಬೆಳೆಸಿಕೊಳ್ಳುವುದು ಅಗತ್ಯ. ಮಕ್ಕಳಲ್ಲಿ ಇತಿಹಾಸದ ಪರಂಪರೆ, ಸಂಸ್ಕೃತಿ ಹಾಗೂ ಜಾಗೃತಿ ಮೂಡಿಸಬೇಕು. ದಾಸರು ಮತ್ತು ಶರಣರ ವಚನಗಳನ್ನು ಕಲಿಸುವ ಮೂಲಕ ಅವುಗಳ ತತ್ವ, ಸಂದೇಶ ಹಾಗೂ ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದು ಹೇಳಿದರು.
ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೊತೆಗೆ ಈ ನೆಲದ ಋಣ ತೀರಿಸುವ ಮನೋಭಾವ ಬೆಳೆಸಿಕೊಂಡು, ತಂದೆ-ತಾಯಿ, ಗುರುಗಳು ಹಾಗೂ ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಮಕ್ಕಳು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿ.ವಿ.ಹೆಚ್.ಎಸ್. ಪ್ರೌಢಶಾಲೆಯ ಮುಖ್ಯಗುರು ಲಿಂಗರಾಜ ಎಸ್. ಪಾಟೀಲ ಮಾತನಾಡಿ, ಶಿಕ್ಷಣ ನೀಡಿದ ಗುರುಗಳನ್ನು ಸ್ಮರಿಸಿ ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಉತ್ತಮ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಸ್ಪೂರ್ತಿ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆಯ ಕಾರ್ಯದರ್ಶಿ ಕರಬಸಪ್ಪ ಭೂಸನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ 2005ನೇ ಸಾಲಿನ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮ ಆಯೋಜಿಸಿ ತಮ್ಮ ಶಿಕ್ಷಕರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು.
ಮುಖಂಡ ಶರಣಬಸಪ್ಪ ನರೋಣಿ, ಬಾಬುರಾವ ಹೊಸಕುರುಬ, ಸ.ಹಿ.ಪ್ರಾ.ಶಾಲೆಯ ಮುಖ್ಯ ಗುರುಗಳು ಚಂದ್ರಕಲಾ, ಅಧ್ಯಕ್ಷ ಅಂದಪ್ಪ ಡೋಣಿ, ನಿವೃತ್ತ ಉಪನ್ಯಾಸಕ ಮಹಾದೇವಪ್ಪ ಹೊಸಳ್ಳಿ, ವಿದ್ಯಾರ್ಥಿ ಮುಖಂಡರಾದ ರಾಜಕುಮಾರ ಜವಳಿ, ರಾಜೇಶ ಜಮಾದಾರ, ಮಹೇಶ ಅಲ್ದಿ, ಮಲ್ಲಿಕಾರ್ಜುನ ಜವಳಿ, ಶಾಮರಾವ ಹೊಸಕುರುಬ, ಶಾಂತಕುಮಾರ ತಡಕಲ್, ವಿಶ್ವನಾಥ, ಮಲ್ಲು ಸುಂಟನೂರ, ಭೀಮಾ ಗೋಮದ, ಬೀರಣ್ಣ ಅರಬ, ಸೇರಿದಂತೆ ಊರಿನ ಗಣ್ಯರು ಭಾಗವಹಿಸಿದ್ದರು. ನಂತರ ಶಾಲಾ ಆವರಣದಲ್ಲಿ ಸಸಿಗಳನ್ನು ಹಚ್ಚಲಾಯಿತು.






