Kalaburagi | ‘ನಶಾಮುಕ್ತ ಸಿಯುಕೆ ಕ್ಯಾಂಪಸ್’ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ: ಪ್ರೊ.ಬಟ್ಟು ಸತ್ಯನಾರಾಯಣ

ಕಲಬುರಗಿ: ಮಾದಕವಸ್ತು ಸೇವನೆಯಿಂದ ಮುಕ್ತವಾದ ಆರೋಗ್ಯಕರ ಶೈಕ್ಷಣಿಕ ವಾತಾವರಣ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, “ನಶಾಮುಕ್ತ ಸಿಯುಕೆ ಕ್ಯಾಂಪಸ್” ನಿರ್ಮಾಣಕ್ಕೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕರೆ ನೀಡಿದರು.
ವಿಶ್ವವಿದ್ಯಾಲಯದಲ್ಲಿ “ನಶಾಮುಕ್ತ ಯುವ–ವಿಕಸಿತ ಭಾರತ ಸಂಕಲ್ಪ ಜಾಗೃತಿ ಅಭಿಯಾನ” ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು “ನಶಾಮುಕ್ತ ಯುವ–ವಿಕಸಿತ ಭಾರತ ಸಂಕಲ್ಪ ಜಾಗೃತಿ ಅಭಿಯಾನ”ದ ಅಂಗವಾಗಿ ದೇಶದ ಯುವಜನತೆ, ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಉದ್ದೇಶಿಸಿ ನೀಡಿದ ನೇರ ವರ್ಚುವಲ್ ಸಂದೇಶವನ್ನು ವಿಶ್ವವಿದ್ಯಾಲಯದ ಆಡಿಟೋರಿಯಂ–1ರಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹಾಗೂ ಆಡಿಟೋರಿಯಂ–2ರಲ್ಲಿ ಪ್ರಭಾರ ಕುಲಸಚಿವ ಪ್ರೊ. ವೆಂಕಟ ರಮಣ ದೊಡ್ಡಿ ಅವರ ಉಪಸ್ಥಿತಿಯಲ್ಲಿ ವೀಕ್ಷಿಸಲಾಯಿತು.
ಬಳಿಕ ಮಾತನಾಡಿದ ಕುಲಪತಿ, ಯುವಜನರಲ್ಲಿ ಮಾದಕವಸ್ತು ಸೇವನೆಯು ಶಿಕ್ಷಣ ಕ್ಷೇತ್ರಕ್ಕೆ ಮಾತ್ರವಲ್ಲದೆ ರಾಷ್ಟ್ರದ ಸಾಮಾಜಿಕ, ದೈಹಿಕ ಹಾಗೂ ಆರ್ಥಿಕ ಅಭಿವೃದ್ಧಿಗೂ ಗಂಭೀರ ಸವಾಲಾಗಿ ಪರಿಣಮಿಸುತ್ತಿದೆ. ಈ ದುಷ್ಪ್ರವೃತ್ತಿಯನ್ನು ತಡೆಯುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಪ್ರಧಾನಮಂತ್ರಿಯವರ ಕರೆಯಂತೆ ಎಲ್ಲರೂ ಮಾದಕವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದಲ್ಲಿ “ನಶಾಮುಕ್ತ ಸಿಯುಕೆ ಕ್ಯಾಂಪಸ್” ಪ್ರತಿಜ್ಞೆ ಸ್ವೀಕರಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಜಾಗೃತಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಾದಕವಸ್ತು ಮುಕ್ತ ಕ್ಯಾಂಪಸ್ ನಿರ್ಮಾಣಕ್ಕೆ ಕೈಜೋಡಿಸಬೇಕು. ಆರೋಗ್ಯಕರ ಸಮಾಜ ನಿರ್ಮಾಣದ ಮೂಲಕವೇ 2047ರ ವಿಕಸಿತ ಭಾರತದ ಕನಸನ್ನು ನನಸಾಗಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮೇರಾ ಯುವ ಭಾರತ (MY Bharat) ಅಭಿಯಾನದಡಿ ವಿಶ್ವವಿದ್ಯಾಲಯದ 2,100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ನಶಾಮುಕ್ತ ಭಾರತ ಅಭಿಯಾನಕ್ಕೆ ನೋಂದಾಯಿಸಿಕೊಂಡಿದ್ದು, ಅವರಿಗೆ ಸ್ವಯಂಚಾಲಿತವಾಗಿ ಪ್ರಮಾಣಪತ್ರವೂ ಲಭಿಸಿದೆ ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ 12 ನಿಕಾಯಗಳ ಡೀನ್‌ಗಳು, 29 ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಪ್ರಧಾನಮಂತ್ರಿಯವರ ವರ್ಚುವಲ್ ಸಂದೇಶವನ್ನು ವೀಕ್ಷಿಸಿದರು.






