Kalaburagi | ಸ್ವಯಂಸೇವಾ ಮನೋಭಾವ ಬೆಳೆಸುವಲ್ಲಿ ಅನುಭವಾಧಾರಿತ ಕಲಿಕೆ ಮಹತ್ವದ್ದು: ಪ್ರೊ.ಚನ್ನವೀರ
ಸಿಯುಕೆಯಲ್ಲಿ ಭಾವನಾತ್ಮಕ, ಆಧ್ಯಾತ್ಮಿಕ ಬುದ್ಧಿಮತ್ತೆ ಕುರಿತು ಕಾರ್ಯಾಗಾರ; 46 ವಿದ್ಯಾರ್ಥಿಗಳು ಭಾಗಿ

ಕಲಬುರಗಿ : ವಿದ್ಯಾರ್ಥಿಗಳಲ್ಲಿ ಸ್ವಯಂಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ ಹಾಗೂ ಸೇವಾ ಗುಣಗಳನ್ನು ಬೆಳೆಸುವಲ್ಲಿ ಅನುಭವಾಧಾರಿತ ಕಲಿಕೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಚನ್ನವೀರ ಆರ್.ಎಂ. ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಮಾಜಕಾರ್ಯ ವಿಭಾಗದ ಸೆಮಿನಾರ್ ಸಭಾಂಗಣದಲ್ಲಿ ನ. 14ರಂದು ಆಯೋಜಿಸಿದ್ದ ‘ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಬುದ್ಧಿಮತ್ತೆಯ ಮೂಲಕ ಸ್ವಯಂಸೇವಾ ಮನೋಭಾವ ಬೆಳೆಸುವುದು’ ಎಂಬ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸಮುದಾಯದೊಂದಿಗಿನ ಒಡನಾಟವನ್ನು ಹೆಚ್ಚಿಸುವುದರ ಜತೆಗೆ, ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಅಗತ್ಯವಾದ ಮೌಲ್ಯಗಳು, ಕೌಶಲ್ಯಗಳು ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಾಗಾರದಲ್ಲಿ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಬುದ್ಧಿಮತ್ತೆಯ ಮಹತ್ವದ ಕುರಿತು ತಿಳಿಸುವುದರ ಜತೆಗೆ, ಸಹಾನುಭೂತಿ, ಸಂವಹನ ಕೌಶಲ್ಯ, ತಂಡದ ಕೆಲಸ, ಸ್ವಯಂ ಅರಿವು, ಭಾವನೆಗಳ ನಿಯಂತ್ರಣ ಹಾಗೂ ಜಾಗೃತ ಮನಸ್ಥಿತಿಯನ್ನು ಬೆಳೆಸುವ ಎಂಟು ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸಲಾಯಿತು.
ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಕಾರ್ಯಾಗಾರವು ಸ್ವಯಂ ಅರಿವು, ಉದ್ದೇಶಪೂರ್ಣ ಜೀವನ ಮತ್ತು ಸಮುದಾಯ ಸೇವೆಯ ಮಹತ್ವವನ್ನು ತಿಳಿಯಲು ಸಹಕಾರಿಯಾಗಿದೆ ಎಂದರು. ಒತ್ತಡದ ಸಂದರ್ಭದಲ್ಲಿ ಭಾವನೆಗಳನ್ನು ನಿಯಂತ್ರಿಸುವುದು, ನಾಯಕತ್ವ, ತಂಡದ ಕೆಲಸ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೌಶಲ್ಯಗಳ ಕುರಿತು ಅರಿವು ಮೂಡಿದೆ ಎಂದು ತಿಳಿಸಿದರು.
ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ಜಯಂತ್ ಬೊರುವಾ ಮಾತನಾಡಿ, ವಿದ್ಯಾರ್ಥಿಗಳ ನಡವಳಿಕೆ ಮತ್ತು ಭಾಗವಹಿಸುವಿಕೆಯಲ್ಲಿ ಕಂಡುಬಂದ ಸಕಾರಾತ್ಮಕ ಬದಲಾವಣೆಗಳನ್ನು ಶ್ಲಾಘಿಸಿದರು. ಇಂತಹ ಕಾರ್ಯಾಗಾರಗಳು ಯುವಜನರ ಸಮಗ್ರ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.
ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಾನೇಶ್ವರ್ ಠಾಕೂರ್ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರ ನಡೆಸಿಕೊಟ್ಟರು. ವಿವಿಧ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳ 46 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಾಗಾರದ ಕೊನೆಯಲ್ಲಿ ಕಲಿತ ವಿಷಯಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು, ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಉದ್ದೇಶದಿಂದ ‘ದಿಕ್ಸೂಚಿಯ ಉದ್ದೇಶ’ ಮತ್ತು ‘ಏಳು ದಿನಗಳ ಕ್ರಿಯಾ ಯೋಜನೆ’ಯನ್ನು ವಿತರಿಸಲಾಯಿತು.






