Kalaburagi | ನೇತ್ರದಾನದಿಂದ ಇಬ್ಬರ ಬದುಕಿಗೆ ಬೆಳಕು: ಡಾ.ಕವಿತಾ ಪಾಟೀಲ
41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ

ಕಲಬುರಗಿ: ಮರಣದ ನಂತರ ನೇತ್ರದಾನ ಮಾಡುವ ಮೂಲಕ ಇಬ್ಬರ ಬದುಕಿಗೆ ಬೆಳಕು ನೀಡಬಹುದು. ದೃಷ್ಟಿಹೀನರ ಜೀವನದಲ್ಲಿ ಬೆಳಕು ಮೂಡಿಸುವ ನೇತ್ರದಾನವು ಸಾರ್ಥಕ ಸಾವು ಹಾಗೂ ಶಾಶ್ವತ ಬದುಕಿಗೆ ದಾರಿ ಮಾಡಿಕೊಡುತ್ತದೆ ಎಂದು ಜಿಮ್ಸ್‌ನ ನೇತ್ರ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ಕವಿತಾ ಪಾಟೀಲ ಹೇಳಿದರು.
ನಗರದ ಜಿಮ್ಸ್ ಜಿಲ್ಲಾ ಆಸ್ಪತ್ರೆಯ ಓಪಿಡಿ ಆವರಣದಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ಆಯೋಜಿಸಿದ್ದ ನೇತ್ರದಾನ ಜಾಗೃತಿ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಹಾಗೂ ಜಿಮ್ಸ್ ಜಿಲ್ಲಾ ಆಸ್ಪತ್ರೆಯ ನೇತ್ರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ನೇತ್ರದಾನದ ಮಹತ್ವ ಕುರಿತು ಮಾತನಾಡಿದ ಡಾ. ಕವಿತಾ ಪಾಟೀಲ, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನೇತ್ರದಾನದ ಕುರಿತು ಅರಿವು ಮೂಡಿಸಿಕೊಂಡು ಮರಣಾನಂತರ ನೇತ್ರದಾನ ಮಾಡಲು ಮುಂದಾಗಬೇಕು. ಇದರಿಂದ ದೃಷ್ಟಿಹೀನರ ಜೀವನದಲ್ಲಿ ಬೆಳಕು ಮೂಡಿಸಲು ಸಾಧ್ಯ ಎಂದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಅಧಿಕಾರಿ ಡಾ. ರವಿಕಾಂತಿ ಕ್ಯಾತನಾಳ ಮಾತನಾಡಿ, ಮಾನವನ ಕಣ್ಣು ದೇಹದ ಪ್ರಮುಖ ಹಾಗೂ ಸಂಕೀರ್ಣ ಇಂದ್ರಿಯ ಅಂಗವಾಗಿದೆ. ಕಣ್ಣು ಬೆಳಕನ್ನು ಗ್ರಹಿಸುವ ಮೂಲಕ ಸುತ್ತಲಿನ ಪ್ರಪಂಚವನ್ನು ಪರಿಚಯಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ನೇತ್ರದಾನದ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ನೇತ್ರದಾನದ ಕುರಿತು ಜಾಗೃತಿ ಮೂಡಿಸಲು ರೋಲ್‌ಪ್ಲೇ, ಜನಜಾಗೃತಿ ಫಲಕಗಳ ಪ್ರದರ್ಶನ ಹಾಗೂ ನೇತ್ರದಾನದ ಪ್ರತಿಜ್ಞಾ ವಿಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ರಾಜೇಶ್ವರಿ ಮಹಾಂತಗೋಳ, ಡಾ. ಶೃತಿ ಬಾಡದ್, ಡಾ. ಜಬೇರ್, ಡಾ. ರಾಜಾಕ್, ಮೊಬೈಲ್ ಯೂನಿಟ್ ವೈದ್ಯೆ ಡಾ. ಶ್ರೀದೇವಿ, ನೇತ್ರಾಧಿಕಾರಿಗಳಾದ ವೀರಣ್ಣ ಎಸ್. ಕುಂಬಾರ, ಬಾಲಭೀಮ್ ಶಿರಸಗಿ, ಜಿಲ್ಲಾ ಸೈಕಾಲಜಿಸ್ಟ್ ಹಾಗೂ ಕೌನ್ಸಿಲರ್ ಮಂಜುನಾಥ್ ಕಂಬಾಳಿಮಠ ಸೇರಿದಂತೆ ಜಿಮ್ಸ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.






