Kalaburagi | ಸೇಡಂ ತಾಲ್ಲೂಕು ಕಚೇರಿಗೆ ಹುಸಿ ಬಾಂಬ್ ಬೆದರಿಕೆ : ಪರಿಶೀಲನೆ

ಕಲಬುರಗಿ : ಸೇಡಂ ಪಟ್ಟಣದಲ್ಲಿರುವ ತಾಲ್ಲೂಕು ಕಚೇರಿ ಪ್ರಜಾಸೌಧಕ್ಕೆ ಹುಸಿ ಬಾಂಬ್ ಬೆದರಿಕೆ ಬಂದಿರುವ ಘಟನೆ ಮಂಗಳವಾರ ನಡೆದಿದೆ.
ಅನಾಮಿಕ ಇಮೇಲ್ ಮೂಲಕ ತಹಶೀಲ್ದಾರ್ ಅವರ ಅಧಿಕೃತ ಇಮೇಲ್‌ಗೆ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ, ತಹಶೀಲ್ದಾರ್ ಶ್ರೀಯಾಂಕ್ ಧನಶ್ರೀ ಅವರು ತಕ್ಷಣವೇ ಸೇಡಂ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶ್ವಾನದಳದ ಸಿಬ್ಬಂದಿ ಪ್ರಜಾಸೌಧಕ್ಕೆ ದೌಡಾಯಿಸಿ ಕಟ್ಟಡದ ಒಳಭಾಗ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ತಪಾಸಣೆ ನಡೆಸಿದರು. ಪ್ರಾಥಮಿಕ ಪರಿಶೀಲನೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಭಯಭೀತರಾದ ಕಚೇರಿ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ಕಚೇರಿಯಿಂದ ಹೊರಗೆ ಬಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಂ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದು, ಇಮೇಲ್ ಮೂಲ ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ.
ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.







