ಕಲಬುರಗಿ | ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿಗೆ ರೈತರಿಂದ ನೋಂದಣಿಗೆ ಜಿಲ್ಲಾಧಿಕಾರಿ ಸೂಚನೆ

ಕಲಬುರಗಿ : 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಸೂರ್ಯಕಾಂತಿ ಖರೀದಿಸಲು ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿಗೆ 1 ಖರೀದಿ ಕೇಂದ್ರದಂತೆ ಜಿಲ್ಲೆಯಲ್ಲಿ ಒಟ್ಟು 11 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಖರೀದಿ ಕೇಂದ್ರಗಳಾಗಿ ಗುರುತಿಸಿದ್ದು, ರೈತ ಭಾಂದವರು ತಮ್ಮ ಸಮೀಪದ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ತಾವು ಬೆಳೆದ ಸೂರ್ಯಕಾಂತಿ ಮಾರಾಟಕ್ಕೆ ನೊಂದಾಯಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ಎಫ್.ಎ.ಕ್ಯೂ. (FAQ) ಗುಣಮಟ್ಟದ ಸೂರ್ಯಕಾಂತಿ ಪ್ರತಿ ಎಕರೆಗೆ 4 ಕ್ವಿಂಟಾಲ್‍ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್‍ವರೆಗೆ ಖರೀದಿಸಲು ಬೆಂಬಲ ಬೆಲೆ 7,280 ರೂ. ನಿಗದಿಪಡಿಸಲಾಗಿದೆ. ಮಾರಾಟದ ಮೊತ್ತವನ್ನು ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ತಕ್ಷಣದಿಂದ ಜಾರಿಗೆ ಬರುವಂತೆ ರೈತರ ನೊಂದಣಿ ಕಾರ್ಯವನ್ನು ಸರ್ಕಾರದ ಆದೇಶದ ದಿನಾಂಕದಿಂದ 80 ದಿನಗಳವರೆಗೆ ಹಾಗೂ ಖರೀದಿ ಪ್ರಕ್ರಿಯೆ ಸರ್ಕಾರದ ಆದೇಶದ ದಿನಾಂಕದಿಂದ 90 ದಿನಗಳವರೆಗೆ ಜರುಗಲಿದೆ.
ಮೇ 16ರ ಆದೇಶದನ್ವಯ ಮೇ 19 ರಂದು ಸೋಮವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ಮಾಡಲು ಸರ್ಕಾರಿ ಆದೇಶದಲ್ಲಿ ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿಯಮಿತ (FAQ) ಸಂಸ್ಥೆಗೆ ನೋಡಲ್ ಏಜೆನ್ಸಿಗಳನ್ನಾಗಿ ನೇಮಿಸಿದೆ ಎಂದು ಅವರು ತಿಳಿಸಿದ್ದಾರೆ.







