ಕಲಬುರಗಿ| ಹಾವು ಕಡಿದು ಕೃಷಿ ಕಾರ್ಮಿಕ ಮೃತ್ಯು

ಅಫಜಲಪುರ: ತಾಲೂಕಿನ ಮಾತೋಳಿ ಗ್ರಾಮದಲ್ಲಿ ರಾತ್ರಿ ವೇಳೆ ಹೊಲದಲ್ಲಿ ಬೆಳೆಗೆ ನೀರು ಹಾಯಿಸುತ್ತಿದ್ದ ಕೃಷಿ ಕಾರ್ಮಿಕನೊಬ್ಬ ಹಾವು ಕಡಿದು ಮೃತಪಟ್ಟಿದ್ದಾರೆ.
ಮೃತರನ್ನು ಮಾತೋಳಿ ಗ್ರಾಮದ ಸೈಬಣ್ಣ ಜಮಾದಾರ್ (37) ಎಂದು ಗುರುತಿಸಲಾಗಿದೆ. ವಿದ್ಯುತ್ ಲೋಡ್ ಶೆಡ್ಡಿಂಗ್ ಸಮಸ್ಯೆಯಿಂದ ರೈತರು ಹಾಗೂ ಕೃಷಿ ಕಾರ್ಮಿಕರು ರಾತ್ರಿ ವೇಳೆಯೇ ಹೊಲದ ಕೆಲಸ ನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಘಟನೆಗೆ ಪ್ರಮುಖ ಕಾರಣವಾಗಿದೆ ಎಂದು ಜೆಡಿಎಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜಕುಮಾರ ಬಡದಾಳ ಆರೋಪಿಸಿದ್ದಾರೆ.
“ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಕೃಷಿ ಕಾರ್ಮಿಕರು ಅಪಾಯವನ್ನು ಲೆಕ್ಕಿಸದೆ ರಾತ್ರಿ ವೇಳೆ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜೀವಹಾನಿ ಸಂಭವಿಸುತ್ತಿರುವುದು ದುಃಖಕರ ಎಂದು ರಾಜಕುಮಾರ ಬಡದಾಳ ಹೇಳಿದ್ದಾರೆ.
ಹಾವು ಕಚ್ಚಿ ಮೃತಪಟ್ಟ ಸೈಬಣ್ಣ ಜಮಾದಾರ್ ಅವರ ಕುಟುಂಬಕ್ಕೆ ಸರ್ಕಾರ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ಮೃತರಿಗೆ ಇಬ್ಬರು ಮಕ್ಕಳಿದ್ದು, ಅವರ ವಿದ್ಯಾಭ್ಯಾಸದ ಸಂಪೂರ್ಣ ಹೊಣೆಗಾರಿಕೆಯನ್ನು ಸರ್ಕಾರ ವಹಿಸಬೇಕು. ಜೊತೆಗೆ ಪತ್ನಿಗೆ ಮಾಸಾಶನ ಹಾಗೂ ಅಗತ್ಯ ಸರಕಾರಿ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.






