ಕಲಬುರಗಿ | ತೊಗರಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ಆರಂಭಿಸಿದ ರೈತರು

ಕಲಬುರಗಿ : ಎಂ.ಎಸ್.ಸ್ವಾಮಿನಾಥನ್ ವರದಿ ಪ್ರಕಾರ ತೊಗರಿಗೆ ಬೆಂಬಲ ಬೆಲೆ ಘೋಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಎತ್ತಿನಬಂಡಿ ಹಾಗೂ ಟ್ರ್ಯಾಕ್ಟರ್ ಗಳನ್ನು ಮುಂದಿಟ್ಟುಕೊಂಡು ರೈತರು ಆಹೋರಾತ್ರಿ ಧರಣಿ ಪ್ರಾರಂಭಿಸಿದರು.
ಪ್ರತಿ ಕ್ವಿಂಟಲ್ ತೊಗರಿಗೆ 12,500 ರೂ. ಬೆಂಬಲ ಬೆಲೆ ನೀಡಬೇಕು, ಹಾಲು ಉತ್ಪಾದಕರ ಸಹಕಾರ ಸಂಘಗಳ (ಕೆಎಂಎಫ್) ಮಾದರಿಯಲ್ಲಿ ತೊಗರಿ ಖರೀದಿ ಕೇಂದ್ರ ಸ್ಥಾಪಿಸಬೇಕು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ತಲಾ 1,000 ರೂಪಾಯಿ ಪ್ರೋತ್ಸಾಹಧನ ನೀಡಬೇಕು. ಹೊರದೇಶದ ತೊಗರಿಗೆ ಶೇ.50ರಷ್ಟು ಆಮದು ಶುಲ್ಕ ಹಾಕಬೇಕು, ತೊಗರಿ ತುರ್ತು ಖರೀದಿ ಕೇಂದ್ರ ಸ್ಥಾಪನೆ, ಬೆಳೆ ವಿಮೆ ಮಂಜೂರು ಸೇರಿದಂತೆ ಹಲವು ಬೇಡಿಕೆಗಳು ಈಡೇರಿಸಬೇಕೆಂದು ರೈತರು ಆಗ್ರಹಿಸಿದರು.
ಅಲ್ಲದೆ, ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲಮನ್ನಾ ಮಾಡಬೇಕು, ರೈತರ, ಕೃಷಿ ಕಾರ್ಮಿಕರ ವಿರೋಧಿಯಾಗಿರುವ ವಿಬಿ ಜಿರಾಮ್ ಜಿ ಕಾಯ್ದೆ ಜಾರಿಗೊಳಿಸುತ್ತಿರುವುದನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಮಹೇಶ್ ಎಸ್.ಬಿ., ಭೀಮಾಶಂಕರ ಮಾಡ್ಯಾಳ, ಮೌಲಾ ಮುಲ್ಲಾ, ಉಮಾಪತಿ ಪಾಟೀಲ್, ಕರೆಪ್ಪ ಕರಗೊಂಡ, ಸಿದ್ದು ಎಸ್.ಎಲ್, ಸಿದ್ದಪ್ಪ ಕಲಶೆಟ್ಟಿ, ಮೌನೇಶ್ ನಾಲವಾರ, ವೀರಣ್ಣ ಗಂಗಾಣಿ, ಸಿದ್ದಮ್ಮ ಮುತ್ತಗಿ, ಜಾಫರ್ ಖಾನ್, ಗುಂಡಪ್ಪ ಅರಣಕಲ, ಸಿದ್ಧಾರ್ಥ್ ಠಾಕೂರ್, ಸಲೀಂ ಅಹಮದ್ ಚಿತ್ತಾಪುರ, ವಿದ್ಯಾಸಾಗರ ಮಾಲಿ ಬಿರಾದಾರ, ಪ್ರಭು ಖೇಣಿ, ಶಂಕರ ಹೂಗಾರ್, ಶ್ಯಾಮರಾವ್ ದಿಗ್ಗಾಂವ, ಇಬ್ರಾಹಿಂ ಪಟೇಲ್, ಸೇರಿದಂತೆ ಮತ್ತಿತರರು ಹಾಜರಿದ್ದರು.







