ಕಲಬುರಗಿ | ರೈತರ ಸಾಲ ಮನ್ನಾ, ಬೆಳೆ ವಿಮೆ ಬಿಡುಗಡೆಗೆ ರೈತ ಸಂಘಟನೆಗಳ ಆಗ್ರಹ

ಕಲಬುರಗಿ: ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ರೈತರು ಕಳೆದ ವರ್ಷ ಕಟ್ಟಿದ ಬೆಳೆ ವಿಮೆ ಹಣ ಬಿಡುಗಡೆ ಗೊಳಿಸಬೇಕು, ಪ್ರತಿ ಎಕರೆಗೆ 25 ಸಾವಿರ ರೂ. ಬೆಳೆ ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ಮಾಲಿಪಾಟೀಲ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜೇವರ್ಗಿ ತಾಲೂಕಿನಲ್ಲಿ ಕಳೆದ ನಾಲ್ಕು ವರ್ಷದಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಮತ್ತು ಪ್ರಸ್ತುತ ವರ್ಷದಲ್ಲಿ ಅತಿಯಾದ ಮಳೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ರೈತರು ಬೆಳೆದ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿವೆ. ಮಳೆಯಿಂದ ಅನೇಕ ರೈತರ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿನ ಆಹಾರ ಸಾಮಗ್ರಿಗಳು ನೀರು ಪಾಲಾಗಿವೆ. ಮತ್ತು ರೈತರ ಜಮೀನುಗಳ ಡೊಣಗಳು ಹಾಗೂ ಚೆಕಡ್ಯಾಮ್‌ಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ರೈತರ ಜೀಮಿನುಗಳಿಗೆ ಹೋಗುವ ರಸ್ತೆಗಳು ಗ್ರಾಮಗಳಿಗೆ ತೆರಳುವ ರಸ್ತೆಗಳು ಮುಖ್ಯರಸ್ತೆಗಳು, ಹಾನಿಯಾಗಿವೆ. ಕೂಡಲೆ ಹಾಳಾದ ರಸ್ತೆಗಳ ರಿಪೇರಿ ಮಾಡಿಸಿ ರೈತರಿಗೆ ಗ್ರಾಮಸ್ಥರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಅವರು ಆಗ್ರಹಿಸಿದರು.
ರೈತರ ಸಾಲವನ್ನು ಸಂಪೂರ್ಣ ಸರಕಾರ ಮನ್ನಾ ಮಾಡಬೇಕು, ರೈತರು ಕಳೆದ ವರ್ಷ ಕಟ್ಟಿದ ಬೆಳೆ ವಿಮೆ ಹಣವನ್ನು ಕೂಡಲೆ ಬಿಡುಗಡೆಗೊಳಿಸಬೇಕು, ಎಕರೆಗೆ 25 ಸಾವಿರ ಬೆಳೆ ಪರಿಹಾರ ನೀಡಬೇಕು, ಕಳಪೆ ರಸ ಗೋಬ್ಬರ ಮತ್ತು ಬಯೋ ಕ್ರೀಮಿನಾಶಕ ಔಷದಿಗಳ ಮಾರುವ ಆಗ್ರೋ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು, ಕೂಡಲೆ ಸರಕಾರ ರೈತರು ಕಳೆದ ವರ್ಷ ಕಟ್ಟಿದತಾಲೂಕಿನ ವಿದ್ಯುತ್ ಇಲಾಖೆಯ ಸಿಬ್ಬಂದಿಯ ಕೊರತೆಯನ್ನು ಕೂಡಲೆ ಸರಿ ಪಡಿಸಬೇಕು, ತಾಲೂಕಿನಲ್ಲಿ ತಾಲೂಕ ಆಡಳಿತ ವತಿಯಿಂದ ಶುದ್ಧ ಕುಡಿಯುವ ನಿರಿನ ವ್ಯವಸ್ಥೆ ಮಾಡಬೇಕು, ಕೃಷಿ ಮಾರುಕಟ್ಟೆಯಲ್ಲಿ ರೈತರಿಗೆ ದಲ್ಲಾಳಿಗಳಿಂದ ತೊಂದರೆಯಾಗುತ್ತಿದ್ದು, ಕೂಡಲೆ ದಲ್ಲಾಳಿಗಳ ಕಾಟವನ್ನು ತಪ್ಪಿಸಬೇಕು, ತಾಲೂಕಿನಲ್ಲಿ ಕೃಷಿ ಭವನ ನಿರ್ಮಿಸಬೇಕೆಂದು ಅವರು ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ ಗೋಪಾಲ ಕಪೂರ ಹಾಗೂ ಕೃಷಿ ಅಧಿಕಾರಿ ಚಂದ್ರಕಾಂತ ಜೀವಣಗಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಪಂಚಯ್ಯ ಹಿರೇಮಠ, ಗೌರವಧ್ಯಕ್ಷ ಮಲ್ಕಣ್ಣ ನರಿಬೊಳ, ಸಾಹೇಬಗೌಡ ಬಿರಾದಾರ, ಶಿವಶರಣಪ್ಪ ಬೊಮ್ಮನಳ್ಳಿ, ಬಸವರಾಜ ಬೊಮ್ಮನಳ್ಳಿ, ಮಲ್ಲಿಕಾರ್ಜುನ ಗೌನಳ್ಳಿ, ವಿಶ್ವನಾಥ ಕಕ್ಕಳಮೇಲಿ, ಮೌನೇಶ ಬೊಮ್ಮನಳ್ಳಿ, ಅಮರ, ಮುತ್ತು ಚನ್ನೂರ, ಮಲ್ಲಣ್ಣಗೌಡ ಹಗರಟಗಿ, ಮಲ್ಲಿಕಾರ್ಜುನ ಯಡ್ರಾಮಿ, ಸಂಗಮ್ಮ ವೆಂಕಟಬೇನೂರ, ಸಂತೋಷ ಚನ್ನೂರ, ಜ್ಯೋತಿ ಸ್ಥಾವರಮಠ, ಪರಮೇಶ್ವರ ಬಿರಾಳ, ಸಿದ್ದಣ್ಣಗೌಡ ಮಾವನೂರ ಸೇರಿದಂತೆ ರೈತ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







