ಕಲಬುರಗಿ | ಅತಿವೃಷ್ಟಿ, ನೆರೆ ಹಾವಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ

ಕಲಬುರಗಿ : ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ನೆರೆ ಹಾವಳಿಗೆ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಾಗೂ ರಾಜ್ಯಕ್ಕೆ ಕೇಂದ್ರ ಸರಕಾರದ ಮಲತಾಯಿ ಧೋರಣೆ ಖಂಡಿಸಿ, ರೈತ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಕಲಬುರಗಿ ತಾಲೂಕಿನ ಸಣ್ಣೂರು ಗ್ರಾಮದಲ್ಲಿ ವಾಗದರಿ ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಬಳಿಕ ಕಲಬುರಗಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಕಲಬುರಗಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸುರಿದ ಭಾರೀ ಮಳೆ ಮತ್ತು ನೆರೆಹಾವಳಿಯಿಂದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನಡೆಸಿದ ಸರ್ವೆಯ ವರದಿಯ ಪ್ರಕಾರ 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ರಾಜ್ಯ ಸರಕಾರ ಎನ್ ಡಿಆರ್ ಎಫ್ ನಿಯಮಗಳ ಪ್ರಕಾರ ಪರಿಹಾರ ಮತ್ತು ಅದಕ್ಕೆ ಹೆಚ್ಚುವರಿ ಪರಿಹಾರ ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೆ ಕೇಂದ್ರ ಸರಕಾರ ಪರಿಹಾರದ ಹಣ ಬಿಡುಗಡೆ ಮಾಡದೆ ವಿಳಂಬ ಮಾಡಿದೆ. ಇದು ಸರಿಯಲ್ಲ, ಕೂಡಲೇ ಪರಿಹಾರದ ಹಣ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರಿಗೆ ರಾಜ್ಯ ಸರಕಾರ ಘೋಷಿಸಿರುವಂತೆ 3,300 ರೂ. ಕಲಬುರಗಿ ಜಿಲ್ಲೆಯ ರೈತರಿಗೂ ನೀಡಬೇಕು ಹಾಗೂ ಜಿಲ್ಲಾಡಳಿತದ ಮಾತು ಕೇಳದೆ ಕಾರ್ಖಾನೆಗಳು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಶಾಂತಪ್ಪ ಪಾಟೀಲ್, ಅಧ್ಯಕ್ಷ ಚಂದು ಜಾಧವ್, ಜಿಲ್ಲಾ ಸಂಚಾಲಕ ಸುನಿಲ ಮಾರುತಿ ಮಾನಪಡೆ, ಬನ್ನೇಪ್ಪ ಪೂಜಾರಿ ಸಣ್ಣೂರ, ಬಸವಣಪ್ಪ ಪಾಟೀಲ್ ಸರಡಗಿ, ನಾಗಣ್ಣ ಕಂಠಿ ಮುಗಳನಗಾಂವ್, ಬಸಣ್ಣ ಕಮ್ಮಠಾಣ, ಮೋಹನ್ ಜಾಧವ್, ಶ್ರೀನಾಥ್ ತಲಕೇರಿ, ಅಪ್ಪಾರಾವ್ ಸುರಾ, ವಾಸುದೇವ ಮೇಲಗಿರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.







