Kalaburagi | ನೆಲೋಗಿ ಕೆಇಬಿ ವಿರುದ್ಧ ರೈತರ ಪ್ರತಿಭಟನೆ; ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
ಏಳು ಗಂಟೆ ನಿರಂತರ ವಿದ್ಯುತ್ ನೀಡಲು ಒತ್ತಾಯ

ಕಲಬುರಗಿ: ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿರುವ ಕೆಇಬಿ ಘಟಕದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಅಗತ್ಯವಿರುವ ಮೂರು ಫೇಸ್ ವಿದ್ಯುತ್ ಸಂಪರ್ಕದಲ್ಲಿ ಪದೇಪದೇ ವ್ಯತ್ಯಯ ಉಂಟಾಗುತ್ತಿದ್ದು, ಸಮರ್ಪಕ ವಿದ್ಯುತ್ ಸಿಗದ ಕಾರಣ ಹಲವು ರೈತರ ಮೋಟಾರ್‌ಗಳು ಸುಟ್ಟುಹೋಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿದಿನ ಏಳು ಗಂಟೆಗಳ ವಿದ್ಯುತ್ ಪೂರೈಕೆ ಮಾಡಬೇಕಿದ್ದರೂ, ಕೇವಲ ಮೂರುರಿಂದ ನಾಲ್ಕು ಗಂಟೆಗಳಷ್ಟು ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದಾಗ ‘ಲೋಡ್ ಸೆಟ್ಟಿಂಗ್ ಸಮಸ್ಯೆ’ ಹಾಗೂ ‘ಕೆಇಬಿ ತಾಂತ್ರಿಕ ತೊಂದರೆ’ ಎಂಬ ಕಾರಣಗಳನ್ನು ನೀಡಲಾಗುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಕೆಇಬಿ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ರೈತರು, ನಿಗದಿತ ಏಳು ಗಂಟೆಗಳ ನಿರಂತರ ಮೂರು ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಸುಟ್ಟುಹೋದ ಮೋಟಾರ್‌ಗಳಿಂದ ಉಂಟಾದ ನಷ್ಟಕ್ಕೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸಮಸ್ಯೆಯನ್ನು ಶೀಘ್ರ ಬಗೆಹರಿಸದಿದ್ದರೆ ಕೆಪಿಟಿಸಿಎಲ್ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಾಂತಪ್ಪ ಅಂಬಿಗೇರ, ಭಗವಂತರಾಯ ಅಂಬಿಗೇರ, ನಿಂಗಪ್ಪ ಸಿದ್ದಯ್ಯ ಹುಲ್ಲೂರ್, ಅಬ್ಬಸಲಿ ಚೌಧರಿ, ಸಿದ್ರಾಮ್ ಕನ್ನೊಳ್ಳಿ, ಅಮೃತ ಯಂಕಂಚಿ, ಕಾಂತಪ್ಪ ಕೂಟನೂರ್, ಬಲಭೀಮ ಕೂಟನೂರ್, ನಿಂಗಣ್ಣ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು.






