ಕಲಬುರಗಿ: ಬೆಳೆ ವಿಮೆ ವೈಫಲ್ಯ ಆರೋಪ – ಲೇಂಗಟಿ, ಲಾಡಮುಗಳಿ ರೈತರ ಅಳಲು

ಕಲಬುರಗಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಲೇಂಗಟಿ ಮತ್ತು ಲಾಡಮುಗಳಿ ಗ್ರಾಮದ ರೈತರು ಬೆಳೆ ವಿಮೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಕಲಬುರಗಿಯ ಶಾಸಕ ಬಸವರಾಜ ಮತ್ತಿಮಡು ಅವರ ಗೃಹ ಕಚೇರಿಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತರು ನೀಡಿದ ಮಾಹಿತಿಯ ಪ್ರಕಾರ, ಅವರು ಬೆಳೆ ವಿಮೆಗಾಗಿ ಹಣ ಕಟ್ಟಿದ್ದರೂ ವಿಮಾ ಕಂಪನಿಯಿಂದ ಯಾವುದೇ ಪರಿಹಾರ ದೊರೆತಿಲ್ಲ. ಬೆಳೆ ಹಾನಿ ಸಮೀಕ್ಷೆಯಲ್ಲಿ ಕೇವಲ ಶೇ.1.50 ಹಾನಿಯಾಗಿದೆ ಎಂದು ವರದಿ ತಯಾರಿಸಲಾಗಿದ್ದು, ಇದರಿಂದ ರೈತರಿಗೆ ಪರಿಹಾರ ಶೂನ್ಯವಾಗಿದೆ ಎಂದು ಅವರು ಅಳಲು ತೋಡಿಕೊಂಡರು.
ಇದೇ ವೇಳೆ, ಅಕ್ಕಪಕ್ಕದ ಗ್ರಾಮಗಳಲ್ಲಿ ಶೇ.80 ರಿಂದ 90 ರಷ್ಟು ಬೆಳೆ ಹಾನಿ ದಾಖಲಾಗಿರುವಾಗ, ಈ ಎರಡು ಗ್ರಾಮಗಳಲ್ಲಿ ಮಾತ್ರ ಅತೀ ಕಡಿಮೆ ಹಾನಿ ತೋರಿಸಿರುವುದು ಅನುಮಾನಾಸ್ಪದವಾಗಿದೆ ಎಂದು ರೈತರು ಶಾಸಕರ ಎದುರು ಅಸಮಾಧಾನ ವ್ಯಕ್ತಪಡಿಸಿದರು. ಸಮೀಕ್ಷಾ ವರದಿ ತಪ್ಪಾಗಿ ತಯಾರಿಸಲಾಗಿದೆ ಎಂದು ಅವರು ಆರೋಪಿಸಿದರು.
ತಕ್ಷಣವೇ ಕ್ರಮ ಕೈಗೊಂಡ ಶಾಸಕ ಬಸವರಾಜ ಮತ್ತಿಮಡು ಅವರು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್, ಜಿಲ್ಲಾ ಸಂಖ್ಯಾಸಂಗ್ರಹಣ ಅಧಿಕಾರಿ ಇಮ್ರಾನ್ ಅಲಿ ಹಾಗೂ ಸಹಾಯಕ ಸಾಂಖ್ಯಿಕ ಅಧಿಕಾರಿ ದಾದಾಗೌಡ ಅವರನ್ನು ಸ್ಥಳಕ್ಕೆ ಕರೆಸಿ ರೈತರ ಸಮ್ಮುಖದಲ್ಲಿ ಚರ್ಚೆ ನಡೆಸಿದರು.
ಶಾಸಕ ಮತ್ತಿಮಡು ಮಾತನಾಡಿ, ನಿರಂತರ ಮಳೆಯಿಂದಾಗಿ ವ್ಯಾಪಕ ಬೆಳೆ ಹಾನಿ ಸಂಭವಿಸಿದ್ದರೂ ಕೇವಲ ಶೇ.1 ರಷ್ಟು ಹಾನಿ ಎಂದು ವರದಿ ಮಾಡಿರುವುದು ಗಂಭೀರ ಲೋಪವಾಗಿದೆ. ತಪ್ಪು ವರದಿ ತಕ್ಷಣ ಸರಿಪಡಿಸಿ, ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಅಧಿಕಾರಿಗಳು, ಬೆಳೆ ವಿಮೆ ಸಮೀಕ್ಷೆ ವೇಳೆ ಗೊಂದಲ ಉಂಟಾಗಿದ್ದು, ತಪ್ಪು ಎಲ್ಲಿ ಸಂಭವಿಸಿದೆ ಎಂಬುದನ್ನು ಪರಿಶೀಲಿಸಿ ಸರಿಪಡಿಸಿ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸತೀಶ ಸೊರಡೆ, ಬಸಯ್ಯ ಮಠಪತಿ, ಕಿರಣ ಖೇಮಶೆಟ್ಟಿ, ರಾಜಕುಮಾರ ಪೊಲೀಸ್ ಪಾಟೀಲ್, ನಿಜಾಮ ದೋಮಾ, ಅನಿಲ ಕುದಮುಡ, ಸಾಯಿಬಣ್ಣ ಪೂಜಾರಿ, ರಾಜು ಪೂಜಾರಿ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.






