Kalaburagi | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎತ್ತಿನ ಬಂಡಿಯೊಂದಿಗೆ ರೈತರ ಪ್ರತಿಭಟನೆ
ಮಾಡಬೂಳ ರಸ್ತೆ ಬಂದ್ ಮಾಡಿ ಪ್ರತಿಭಟನೆ

ಕಲಬುರಗಿ/ಕಾಳಗಿ : ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು, ರೈತರಿಗೆ ಶೇ. 100ರಷ್ಟು ಬೆಳೆ ವಿಮೆ ಮಂಜೂರು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತೊಗರಿ ಬೆಳೆಗಾರರ ಹಿತರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ರೈತರು ಗುರುವಾರ ಸೇಡಂ–ಕಲಬುರಗಿ ರಾಜ್ಯ ಹೆದ್ದಾರಿಯ ಮಾಡಬೂಳ ರಸ್ತೆಯನ್ನು ಬಂದ್ ಮಾಡಿ, ಎತ್ತಿನ ಬಂಡಿಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದರು.
ತೊಗರಿ ಬೆಳೆಯ ಮೇಲೆ ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುತ್ತದೆ. ಆದರೆ, ಕಳೆದ ಐದು ತಿಂಗಳಿಂದ ಮಳೆಯಾಗದ ಕಾರಣ ತೀವ್ರ ಬರಗಾಲ ಆವರಿಸಿದ್ದು, ಬಿತ್ತಿದ್ದ ಅಲ್ಪಸ್ವಲ್ಪ ಬೆಳೆಯೂ ಒಣಗಿದೆ. ಇದರಿಂದ ರೈತರು ತತ್ತರಿಸಿ ಹೋಗಿದ್ದಾರೆ. ಸರ್ಕಾರ ತೊಗರಿ ಬೆಳೆಗಾರರಿಗೆ ಈವರೆಗೆ ನಯಾಪೈಸೆ ಪರಿಹಾರ ನೀಡಿಲ್ಲ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಹಳ್ಳಕೊಳ್ಳಗಳು, ನಾಲೆಗಳು, ನದಿಗಳು, ಬಾವಿಗಳು ಹಾಗೂ ಬೋರ್‌ವೆಲ್‌ಗಳು ಬತ್ತಿಹೋಗಿವೆ. ಮುಂಗಾರು ಬೆಳೆಗಳಾದ ತೊಗರಿ, ಹೆಸರು, ಉದ್ದು ಮತ್ತು ಸೋಯಾಬೀನ್ ಸಂಪೂರ್ಣ ಕೈಕೊಟ್ಟಿವೆ. ಉರಿಬಿಸಿಲಿನ ತಾಪದಿಂದಾಗಿ ಹಿಂಗಾರು ಬೆಳೆಗಳಾದ ಜೋಳ, ಕಡಲೆ, ಶೇಂಗಾ ಹಾಗೂ ಗೋಧಿ ಬೆಳೆಯಲೂ ಸಾಧ್ಯವಾಗುತ್ತಿಲ್ಲ. ದನಕರುಗಳಿಗೂ ಮೇವು ದೊರೆಯದಂತಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.
ತೊಗರಿ ಮತ್ತು ಹತ್ತಿ ಬೆಳೆಗಾರರ ರಕ್ಷಣೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯನ್ನು ಜಾರಿಗೆ ತರಬೇಕು. ಪಂಪ್‌ಸೆಟ್ ಹೊಂದಿರುವ ರೈತರಿಗೆ ಹಗಲಿನಲ್ಲಿ ತ್ರಿಫೇಸ್ ವಿದ್ಯುತ್ ಹಾಗೂ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸಬೇಕು. ಕೆಟ್ಟುಹೋಗಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು (ಟಿ.ಸಿ.) ತಕ್ಷಣ ದುರಸ್ತಿಪಡಿಸಬೇಕು. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುವಾಗ ಟೋಲ್ ನಾಕಾಗಳಲ್ಲಿ ರೈತರಿಂದ ಹಣ ವಸೂಲಿ ಮಾಡುವುದನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಬರದ ಕುರಿತು ವಿಶೇಷ ಅಧಿವೇಶನ ನಡೆಸಿ, ಭಿಕ್ಷೆ ನೀಡಿದ ರೀತಿಯಲ್ಲಿ ರೈತರಿಗೆ ಕೇವಲ 2,500 ರೂ. ಪರಿಹಾರ ಘೋಷಿಸಿದೆ. ಈ ಅವೈಜ್ಞಾನಿಕ ಬರ ಪರಿಹಾರವನ್ನು ರೈತ ಸಂಘಟನೆಗಳು ಖಂಡಿಸುತ್ತವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪ್ರತಿ ಎಕರೆಗೆ 5,000 ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ಕಣ್ಣು ಮತ್ತು ಕಿವಿ ಮುಚ್ಚಿಕೊಂಡು ಕುಳಿತಂತಿದೆ. ರೈತರ ನೋವು ಮತ್ತು ಸಂಕಷ್ಟಗಳು ಸರ್ಕಾರಕ್ಕೆ ಕಾಣುತ್ತಿಲ್ಲ, ಅವರ ಆಕ್ರಂದನವೂ ಕೇಳಿಸುತ್ತಿಲ್ಲ. ಕೂಡಲೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು. ರಾಜ್ಯ ಸರ್ಕಾರವು ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ಗಳು ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘಗಳ (ವಿಎಸ್‌ಎಸ್‌ಎನ್) ಸಾಲವನ್ನೂ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಹಾಗೂ ಕೇಂದ್ರ ಕೃಷಿ ಸಚಿವರಿಗೆ ಬರೆದ ಮನವಿಪತ್ರವನ್ನು ಕಾಳಗಿ ತಾಲೂಕು ತಹಶೀಲ್ದಾರ್ ಪೃಥ್ವಿರಾಜ್ ಪಾಟೀಲ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ವೀರಣ್ಣ ಗಂಗಾಣಿ, ಶರಣಗೌಡ ಪಾಟೀಲ, ಶಂಕರ ಪೂಜಾರಿ, ಕರೆಪ್ಪ ಕರಗೊಂಡ, ಸಿದ್ಧಲಿಂಗ ಹಡಪದ, ಭೀಮರಾಯ ಮತ್ತಿಮೂಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.






