Kalaburagi | ಕುಸನೂರ ಗ್ರಾಮದಲ್ಲಿ ಸಂಭ್ರಮದ ಕಾರ ಹುಣ್ಣಿಮೆ ಆಚರಣೆ

ಕಲಬುರಗಿ, ಜೂ.30: ರೈತರ ಸಾಂಪ್ರದಾಯಿಕ ಹಬ್ಬವಾದ ಕಾರ ಹುಣ್ಣಿಮೆಯನ್ನು ನಗರದ ಹೊರವಲಯದ ಕುಸನೂರ ಗ್ರಾಮದಲ್ಲಿ ಸೋಮವಾರ ಸಂಭ್ರಮ, ಸಡಗರ ಹಾಗೂ ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು. ಅಲಂಕೃತ ಎತ್ತುಗಳ ಮೆರವಣಿಗೆ, ಎತ್ತುಗಳ ಓಟ ಹಾಗೂ ಗ್ರಾಮೀಣ ಕ್ರೀಡೆಗಳು ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದವು.
ಬೆಳಗ್ಗಿನಿಂದಲೇ ರೈತರು ತಮ್ಮ ಎತ್ತುಗಳು ಹಾಗೂ ದನ-ಕರುಗಳಿಗೆ ಸ್ನಾನ ಮಾಡಿಸಿ, ಬಣ್ಣಬಣ್ಣದ ರಂಗುಗಳಿಂದ ಅಲಂಕರಿಸಿದರು. ಕೊಂಬುಗಳಿಗೆ ಬಣ್ಣ ಹಚ್ಚಿ, ಹೂವಿನ ಹಾರಗಳು ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ಶೃಂಗಾರಗೊಳಿಸಿದ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಸಂಪ್ರದಾಯದಂತೆ ಎತ್ತುಗಳನ್ನು ಓಡಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
ಸಂಜೆ ವೇಳೆಗೆ ಗ್ರಾಮದ ಎಲ್ಲ ಎತ್ತುಗಳನ್ನು ಊರಿನ ಅಗಸಿ ಬಳಿ ಒಟ್ಟುಗೂಡಿಸಿ, ಸಂಪ್ರದಾಯದಂತೆ ಕರಿ ಹರಿಯುವ ಆಚರಣೆ ನೆರವೇರಿಸಲಾಯಿತು. ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಜಾನುವಾರುಗಳ ಆರೋಗ್ಯಕ್ಕಾಗಿ ರೈತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಹಬ್ಬದ ಅಂಗವಾಗಿ ಗುಂಡು ಎತ್ತುವುದು ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬೆಳ್ಳಿ ಕಡಗ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಶಿವ ಅಷ್ಟಗಿ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಮಂಜುನಾಥ್ ಮಠಪತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬರಗಾಲಿ, ಗ್ರಾಮದ ಮುಖಂಡರಾದ ಮಲ್ಲಯ್ಯ ಮಠಪತಿ, ನಾಗಣ್ಣ ದಂಡೋತಿ, ರೇವಣಸಿದ್ದಯ್ಯ ಮಠಪತಿ, ರಮೇಶ್ ತೆಗ್ಗಿನಮನಿ, ಶಿವಶರಣ ಬರಗಾಲಿ ಸೇರಿದಂತೆ ಅನೇಕ ಗಣ್ಯರು, ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
ಗ್ರಾಮದಲ್ಲಿ ದಿನವಿಡೀ ಹಬ್ಬದ ವಾತಾವರಣ ಮನೆಮಾಡಿದ್ದು, ರೈತರು ಕುಟುಂಬ ಸಮೇತರಾಗಿ ಪಾಲ್ಗೊಂಡು ಕಾರ ಹುಣ್ಣಿಮೆಯ ಸಂಭ್ರಮವನ್ನು ಆಚರಿಸಿದರು.






