Kalaburagi | ಶರಣಬಸವೇಶ್ವರ ಕೆರೆಯಲ್ಲಿ ತ್ಯಾಜ್ಯ ಎಸೆದರೆ ದಂಡ : ಸಹಕರಿಸಲು ಮನವಿ

ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಶ್ರೀ ಶರಣಬಸವೇಶ್ವರ ಕೆರೆಯ ಸ್ವಚ್ಛತೆ ಹಾಗೂ ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ಕೆರೆಯ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಸ, ಪ್ಲಾಸ್ಟಿಕ್ ಸೇರಿದಂತೆ ಯಾವುದೇ ರೀತಿಯ ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕೆರೆಯನ್ನು ಸಾರ್ವಜನಿಕರಿಗೆ ಮುಕ್ತ ವಾಯುವಿಹಾರ, ವಿಶ್ರಾಂತಿ ಹಾಗೂ ಮನರಂಜನೆಗಾಗಿ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದೆ. ಆದರೆ, ಕೆಲವು ಸಾರ್ವಜನಿಕರು ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಗೂ ಕೆರೆಯೊಳಗೆ ಕಸ, ಪ್ಲಾಸ್ಟಿಕ್, ಆಹಾರದ ತ್ಯಾಜ್ಯ ಮತ್ತು ಇತರ ವಸ್ತುಗಳನ್ನು ಎಸೆಯುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ. ಆದ್ದರಿಂದ ಕೆರೆಯ ಆವರಣದಲ್ಲಿ ಯಾವುದೇ ರೀತಿಯ ತ್ಯಾಜ್ಯವನ್ನು ಎಸೆಯದೆ, ನಿಗದಿಪಡಿಸಿದ ಕಸದ ತೊಟ್ಟಿಗಳಲ್ಲಿಯೇ ಹಾಕುವ ಮೂಲಕ ಮಹಾನಗರ ಪಾಲಿಕೆಯ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಕೋರಿದ್ದಾರೆ.
ಸಾರ್ವಜನಿಕರ ಪ್ರವೇಶ ಸಮಯ :
ಸಾರ್ವಜನಿಕರು ಪ್ರತಿದಿನ ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಕೆರೆಯ ಆವರಣದಲ್ಲಿ ವಾಯುವಿಹಾರ ಮಾಡಬಹುದು ಹಾಗೂ ಕೆರೆಯ ಸೌಂದರ್ಯವನ್ನು ಆಸ್ವಾದಿಸಬಹುದು. ಆದರೆ, ಕೆರೆಯೊಳಗೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಸ, ಪ್ಲಾಸ್ಟಿಕ್, ಆಹಾರದ ತ್ಯಾಜ್ಯ, ಬಾಟಲಿ ಸೇರಿದಂತೆ ಯಾವುದೇ ರೀತಿಯ ತ್ಯಾಜ್ಯ ವಸ್ತುಗಳನ್ನು ಎಸೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ತ್ಯಾಜ್ಯ ಎಸೆದರೆ ದಂಡ :
ಕೆರೆಯ ಸ್ವಚ್ಛತೆ ಮತ್ತು ಸಂರಕ್ಷಣೆ ಖಚಿತಪಡಿಸಿಕೊಳ್ಳಲು ಪಾಲಿಕೆಯಿಂದ ಪ್ರತ್ಯೇಕ ಸಿಬ್ಬಂದಿ ತಂಡವನ್ನು ನಿಯೋಜಿಸಲಾಗಿದೆ. ಸಿಬ್ಬಂದಿಯ ಪರಿಶೀಲನೆಯ ವೇಳೆ ತ್ಯಾಜ್ಯ ಎಸೆಯುವುದು ಕಂಡುಬಂದರೆ ನಿಯಮಾನುಸಾರ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿಗೆ ತ್ಯಾಜ್ಯ ಎಸೆಯುವುದು ಕಂಡುಬಂದಲ್ಲಿ 1,000 ರೂ. ದಂಡ ಹಾಗೂ ಎರಡನೇ ಬಾರಿ ಮತ್ತು ನಂತರ ಪುನರಾವರ್ತನೆಯಾದಲ್ಲಿ 10,000 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಕೆರೆಯ ಸ್ವಚ್ಛತೆ, ಸೌಂದರ್ಯ ಹಾಗೂ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಸಾರ್ವಜನಿಕರು ತಮ್ಮ ಕುಟುಂಬದ ಸದಸ್ಯರು, ಮಕ್ಕಳು ಹಾಗೂ ಸ್ನೇಹಿತರಿಗೂ ಸ್ವಚ್ಛತೆಯ ಮಹತ್ವ ತಿಳಿಸಿ, ಕೆರೆಯ ಆವರಣದಲ್ಲಿ ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸಬೇಕು. ತ್ಯಾಜ್ಯವನ್ನು ನಿಗದಿಪಡಿಸಿದ ಕಸದ ತೊಟ್ಟಿಗಳಲ್ಲಿಯೇ ಹಾಕಿ ಪಾಲಿಕೆಯ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ಕಲಬುರಗಿ ನಗರವನ್ನು ಸ್ವಚ್ಛ, ಸುಂದರ, ಹಸಿರು ಹಾಗೂ ಪರಿಸರಸ್ನೇಹಿ ನಗರವನ್ನಾಗಿ ರೂಪಿಸುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.






