ಕಲಬುರಗಿ | ನಿರ್ಮಾಣ ಹಂತದ ಸಿಮೆಂಟ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: 20ಕ್ಕೂ ಹೆಚ್ಚು ಶೆಡ್ಗಳು ಭಸ್ಮ

ಕಲಬುರಗಿ; ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ಬಳಿ ಇರುವ ನಿರ್ಮಾಣ ಹಂತದ 'ಗುಲ್ಬರ್ಗ ಸಿಮೆಂಟ್ ಲಿಮಿಟೆಡ್' ಕಾರ್ಖಾನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಾರ್ಮಿಕರಿಗಾಗಿ ನಿರ್ಮಿಸಿದ್ದ 20ಕ್ಕೂ ಹೆಚ್ಚು ಶೆಡ್ಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಗುಲ್ಬರ್ಗ ಸಿಮೆಂಟ್ ಲಿಮಿಟೆಡ್ ಕಾರ್ಖಾನೆಯ ಆವರಣದಲ್ಲಿ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದ್ದು ಬೆಂಕಿಯ ಕಿಡಿಗಳು ಸುತ್ತಮುತ್ತ ವ್ಯಾಪಿಸಿವೆ. ಇದರ ಪರಿಣಾಮವಾಗಿ ಕಾರ್ಮಿಕರು ವಾಸಿಸುತ್ತಿದ್ದ ಅಥವಾ ಬಳಕೆಗಾಗಿ ನಿರ್ಮಿಸಿದ್ದ 20ಕ್ಕೂ ಅಧಿಕ ಶೆಡ್ಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ.
ಶೆಡ್ಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು, ದವಸ ಧಾನ್ಯಗಳು ಹಾಗೂ ಇತರೆ ವಸ್ತುಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಸ್ಫೋಟ ಸಂಭವಿಸಿದ ಸಮಯದಲ್ಲಿ ಕಾರ್ಮಿಕರೆಲ್ಲರೂ ಕೆಲಸಕ್ಕೆ ತೆರಳಿದ್ದರಿಂದ ಮತ್ತು ಶೆಡ್ಗಳಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆ ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.






